ಮರುಭೂಮಿ ಎಂದಾಕ್ಷಣ ನಮಗೆ ಒಂಟೆ, ಖರ್ಜೂರ ಮತ್ತು ಓಯಾಸಿಸ್ ಎಂಬ ಶಬ್ದಗಳು ನೆನಪಾಗದೇ ಇರಲಾರವು. ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿರುವ ಅಲ್- ಅಹ್ಸಾ ಜಗತ್ತಿನ ಅತಿದೊಡ್ಡ ಓಯಾಸಿಸ್ ಪ್ರದೇಶ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಪಡೆದಿರುವ ಈ ವಿಸ್ತಾರವಾದ ಭೂಭಾಗ ಖರ್ಜೂರ ಮತ್ತು ತಾಳೆ ಮರಗಳ ಹಸಿರಿನಿಂದ ತುಂಬಿದೆ. ಇಲ್ಲಿ ೬೦ ಕ್ಕೂ ಹೆಚ್ಚು ನೈಸರ್ಗಿಕ ನೀರಿನ ಬುಗ್ಗೆಗಳಿವೆ. ಇದು ಅತಿದೊಡ್ಡ ಖಾಲಿ ಮರುಭೂಮಿಯಾದ ರಬ್ ಅಲ್ ಖಲಿಯ ಒಂದು ಭಾಗದಲ್ಲಿದ್ದು ಸುತ್ತ ಪರ್ವತಗಳಿಂದ ಆವೃತವಾಗಿದೆ.
ಇದು ಖರ್ಜೂರ್ ಮತ್ತು ಪಾಮ್ ಬೆಳೆಗೆ ಹೆಸರಾದ ಸ್ಥಳ. ಸುಮಾರು ೩೦ ಸಾವಿರ ಎಕರೆ ಪ್ರದೇಶದಲ್ಲಿ ತುಂಬಿರುವ ಖರ್ಜೂರ ಗಿಡಗಳಿಂದ ವರ್ಷಕ್ಕೆ ೧೦೦ ಸಾವಿರ ಟನ್ ಖರ್ಜೂರ ಬೆಳೆ ಉತ್ಪಾದನೆಯಾಗುತ್ತದೆ. ಈ ನಗರವು ಟೇಲರಿಂಗ್ ಕೆಲಸಕ್ಕೂ ಹೆಸರಾದದ್ದು. ಸಾಂಪ್ರದಾಯಿಕ ಪುರುಷರ ಮೇಲಂಗಿ ಬಿಷ್ಟ ಮೊದಲಾದವು ಇಲ್ಲಿ ತಯಾರಾಗುತ್ತವೆ. ಮಸಾಲೆ ಪದಾರ್ಥಗಳ ಮಾರಾಟ ಸಹ ಹೆಚ್ಚು. ಅರೇಬಿಯಾದ ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಇದೂ ಒಂದು. ಇಲ್ಲಿಯೇ ಘವಾರ್ ಫೀಲ್ಡ್ ತೈಲ ಉತ್ಪಾದನಾ ಘಟಕವಿದೆ. ಈ ದೇಶದ ಮೊದಲ ಮಸೀದೆಯೆನ್ನಲಾಗುವ ಜವಾಥಾ ಮತ್ತು ಇತರ ಹಲವು ಐತಿಹಾಸಿಕ ಕಟ್ಟಡಗಳು, ಕೋಟೆಗಳು, ಗುಹೆಗಳು ಪ್ರವಾಸಿಗರ ಆಕರ್ಷಣೆಯೆನಿಸಿವೆ. ಇದು ಸಾವಿರಾರು ವರ್ಷಗಳಿಂದ ಅರಬ್ಬರ ಒಂಟೆ ಕಾರವಾನ್ ವ್ಯಾಪಾರದ ಮಾರ್ಗವಾಗಿದೆ. ಅಲ್ ಅಸ್ಫಾ ಎಸ್ ಇನ್ನೊಂದು ಸರೋವರವೂ ಇಲ್ಲಿದೆ.
೨೦೧೮ ರಲ್ಲಿ ಅಲ್ ಅಹ್ಸಾ ವಿಶ್ವ ಪರಂಪರೆಯ ತಾಣವಾಗಿ‌ಮನ್ನಣೆ ಪಡೆಯಿತು. ೨೦೧೫ ರಲ್ಲಿ ಯುನೆಸ್ಕೋ ನೆಟ್ ವರ್ಕ್ ನಲ್ಲಿ ಪರಿಗಣಿತವಾಯಿತು. ಸಾವಿರ ವರ್ಷಗಳ ಹಿಂದೆಯೇ ಇದು ಒಂದು ಲಕ್ಷ ಜನಸಂಖ್ಯೆಯ ನಗರವೆನಿಸಿಕೊಂಡಿತ್ತೆನ್ನಲಾಗಿದೆ. ಈಗ ಅತ್ಯಾಧುನಿಕ ಮಹಾನಗರವಾಗಿ ಬೆಳೆದುನಿಂತಿದ್ದು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೆಟ್ಟಿ ಕೊಡುತ್ತಾರೆ. ಈ ದೇಶದ ಇತರ ಭಾಗಗಳಲ್ಲಿ ಇದ್ದ ಸಾಕಷ್ಟು ಓಯಾಸಿಸ್ ನೀರಿನ ಒರತೆಗಳು ವಸತಿ ಪ್ರದೇಶಗಳ ಬೆಳವಣಿಗೆಯಿಂದ ಮಾಯವಾಗಿದ್ದು ಅಲ್ ಅಹ್ಸಾ ಮಾತ್ರ ತನ್ನ ನೀರಿನ ಬುಗ್ಗೆಗಳನ್ನು ಉಳಿಸಿಕೊಂಡು ಹಸಿರುಸಿರು ಬಿಡುತ್ತಿದೆ.