ಎಲ್ಲ ಬಗೆಯ ಮನೋರಂಜನೆಗಳೂ ನಿಷೇಧಿತವಾದ ಒಂದು ಪ್ರದೇಶದಲ್ಲಿ ಸಿನಿಮಾ ರಂಗ ಬೆಳೆಯುವದಾದರೂ ಹೇಗೆ? ಸೌದಿ ಅರೇಬಿಯಾದಲ್ಲಿ ೧೯೮೩ ರಿಂದ ೨೦೧೮ ರವರೆಗೆ ೩೫ ವರ್ಷಗಳ ಕಾಲ ಸಿನಿಮಾ ಮಂದಿರಗಳೇ ಮುಚ್ಚಲ್ಪಟ್ಟಿದ್ದವು. ಚಲನಚಿತ್ರ ಪ್ರದರ್ಶನ ನಿಷೇಧಿಸಲ್ಪಟ್ಟಿತ್ತು. ಆದ್ದರಿಂದ ‌ಸಹಜವಾಗಿಯೇ ಇಲ್ಲಿ ಚಲನಚಿತ್ರ ಉದ್ಯಮವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಅಚ್ಚರಿಯಾದರೂ ನಿಜ ಎಂಬಂತೆ ೧೯೭೦ ಕ್ಕಿಂತ ಮೊದಲು ಇಲ್ಲಿ ಸಿನಿಮಾ ಥಿಯೇಟರ್ ಗಳಿದ್ದವು, ಸಂಗಡ ಮದ್ಯಪಾನವೂ ಈಗಿನಂತೆ ನಿಷೇಧಿತವಾಗಿರಲಿಲ್ಲ. ೧೯೮೦ ರ ಸುಮಾರಿಗೆ ಕಟ್ಟರ್ ಧಾರ್ಮಿಕ ಮೂಲಭೂತವಾದಿಗಳು ಎಲ್ಲ ಬಗೆಯ ಮನೋರಂಜನೆಗಳ ವಿರುದ್ಧ ಬಂಡೆದ್ದರಲ್ಲದೆ ಧಾರ್ಮಿಕ ಭಯೋತ್ಪಾದಕರು ಪವಿತ್ರ ಮೆಕ್ಕಾವನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹತ್ತು ದಿವಸಗಳಲ್ಲಿ ಆ ಉಗ್ರರನ್ನು ಹತ್ತಿಕ್ಕಲಾಯಿತು ಮತ್ತು ಅವರನ್ನೆಲ್ಲ ಗಲ್ಲಿಗೇರಿಸಲಾಯಿತು. ‌ಮದ್ಯಪಾನ ನಿಷೇಧವಾದರೂ ಥಿಯೇಟರ್ ಗಳನ್ನು ಮುಚ್ಚಲಾಯಿತು. ಸಿನಿಮಾ ನೋಡುವುದು ಅಪರಾಧವಾಯಿತು.

ಸೌದಿ ಅರೇಬಿಯಾದಲ್ಲಿ ಪತ್ರಿಕೆ ,ಸಾಹಿತ್ಯ, ಸಿನಿಮಾ, ಟಿವಿ, ಎಲ್ಲವೂ ಸರಕಾರದ ಆಧೀನದಲ್ಲಿದ್ದು ಅಲ್ಲಿ ಯಾವುದೇ ಬಗೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಸರಕಾರದ ನಿರ್ದೇಶನದಂತೆಯೆ ನಡೆದುಕೊಳ್ಳಬೇಕಾಗುತ್ತದೆ. ಸೆನ್ಸಾರಸಿಪ್ ನಿಯಮಗಳು ಬಿಗಿಯಾಗಿವೆ. ಸಾಮಾಜಿಕ ಜಾಲತಾಣ ಪೂರ್ಣ ನಿಷೇಧಿತವಲ್ಲವಾದರೂ ಅಲ್ಲಿಯೂ ಸರಕಾರದ ನಿಗಾ ಇದ್ದೇ ಇರುತ್ತದೆ. ೨೦೨೦ ರಲ್ಲಿ ಅರೇಬಿಯನ್ ವಿಕಿಪೀಡಿಯಾದ ಇಬ್ಬರು ಸಂಪಾದಕರನ್ನು ಒಂದೇ ದಿನ ಬಂಧಿಸಲಾಯಿತಲ್ಲದೆ ಒಬ್ಬರಿಗೆ ೩೨ ವರ್ಷ, ಮತ್ತೊಬ್ಬರಿಗೆ ಎಂಟು ವರ್ಷ ಜೈಲು ಶಿಕ್ಷೆಯಾಯಿತು. ಯೂ ಟ್ಯೂಬ್ ನಿಷೇಧವಿಲ್ಲ. ಇಲ್ಲಿಯ ಇಂದಿನ ಯುವಜನಾಂಗ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿದ್ದಾರೆ.
೨೦೧೫ ರ ನಂತರ ದೇಶದಲ್ಲಿ ಸಿನಿಮಾ ನಿರ್ಮಾಣ ಮತ್ತು ಪ್ರದರ್ಶನದ ಕುರಿತು ಸಾರ್ವಜನಿಕ ಮತ್ತು ಬೌದ್ಧಿಕ ವಲಯದಿಂದ ಆಗ್ರಹ ಬಲವಾದ್ದರಿಂದ ಸರಕಾರ ನಿಷೇಧ ಸಡಿಲಿಸಲು ಯೋಚಿಸಿತು. ೨೦೧೮ ರಿಂದ ಈ ನಿಷೇಧ ತೆಗೆದು ಹಾಕಲಾಯಿತಲ್ಲದೆ, ೨೦೩೦ ರ ವೇಳೆಗೆ ದೇಶದಲ್ಲಿ ೩೦೦ ಕ್ಕೂ ಹೆಚ್ಚು ಥಿಯೇಟರ್ ಗಳು ಮತ್ತು ೨ ಸಾವಿರಕ್ಕೂ ಹೆಚ್ಚು ಸಿನಿಮಾ ಪ್ರದರ್ಶನದ ಗುರಿ ಇರಿಸಿಕೊಂಡಿರುವುದಾಗಿ ಹೇಳಲಾಯಿತು.
೧೯೭೦ ಕ್ಕೂ ಮೊದಲು ಜೆಡ್ಡಾ , ಮೆಕ್ಕಾ ರಿಯಾದ್ ಮೊದಲಾದೆಡೆ ಭಾರತ, ಈಜಿಪ್ತ, ಟರ್ಕಿಶ್ ದೇಶಗಳ ಸಿನಿಮಾಗಳು ಪ್ರದರ್ಶಿತವಾಗಿದ್ದುಂಟು. ದೇಶದೊಳಗಿನ ಸ್ವತಂತ್ರ ನಿರ್ಮಾಣ ಪ್ರಯತ್ನಗಳು ಇರಲಿಲ್ಲ. ೨೦೦೬ ರಲ್ಲಿ ಮೊದಲ ಅರೇಬಿಕ್ ಭಾಷಾ ಚಿತ್ರ ಯುಎಇ ಯಲ್ಲಿ ಚಿತ್ರಿಕರಣವಾಯಿತು. ಪೂರ್ಣವಾಗಿ ಸೌದಿಯಲ್ಲೇ ಚಿತ್ರೀಕರಣವಾದ ಮತ್ತು ಸೌದಿ ಕಲಾವಿದರೇ ಅಭಿನಯಿಸಿದ ಆ ಎಂಬ ಚಿತ್ರ ೨೦೧೨ ರಲ್ಲಿ ನಿರ್ಮಾಣವಾಯಿತು. ಮಹಮ್ಮದ ಸಬ್ಬಾಗ್ ನಿರ್ದೇಶನದ ಬರಾಕಾ ಮೀಟ್ಸ್ ಬರಾಕಾ ಎಂಬ ಸಿನಿಮಾ ೨೦೧೫ ರಲ್ಲಿ ತಯಾರಾಗಿ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ಅಬ್ದುಲ್ ಅಲ್ ಇಯಾಫ್ ನಿರ್ದೇಶನದ ಸಾಕ್ಷ್ಯಚಿತ್ರ ” ಸಿನಿಮಾ -೫೦೦ ಕಿ. ಮೀ. ” ಚಲನಚಿತ್ರ ರಂಗದ ಭವಿಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಯಿತು. ನಂತರ ಅರಸು ಸರಕಾರ ನಿಷೇಧ ನಿರ್ಬಂಧಗಳನ್ನು ಸಡಿಲಿಸಲು ನಿರ್ಣಯ ಕೈಕೊಂಡಿತು.
ಸೌದಿಯಲ್ಲೀಗ ೨೬೨ ಥಿಯೇಟರ್ ಮತ್ತು ಗ್ಯಾಲರಿಗಳಿದ್ದು, ಸೌದಿ ಅರೇಬಿಯಾ ಸೊಸೈಟಿ ಆಫ್ ಕಲ್ಚರ್ & ಆರ್ಟ್ ಆವರಣ ೧೧ ಥಿಯೇಟರ್ ಗ್ಯಾಲರಿಗಳನ್ನು ಹೊಂದಿದ್ದು, ಲಿಟರರಿ ಕ್ಲಬ್ ಗಳು ೧೩ ಥಿಯೇಟರ್ ಗ್ಯಾಲರಿಗಳಿಂದ ಕೂಡಿದೆ. ಇವುಗಳಲ್ಲಿ ಶೈಕ್ಷಣಿಕ ಉದ್ದೇಶದ ಸಿನಿಮಾಗಳು ಪ್ರದರ್ಶಿತವಾಗುತ್ತವೆ. ಮೊದಲು ಕೇವಲ ಅರೇಬಿಕ್ ಭಾಷೆಗೆ ಡಬ್ ಮಾಡಲಾದ ವಿದೇಶಿ ಕಾರ್ಟೂನ್ ಚಿತ್ರಗಳನ್ನಷ್ಟೇ ಮಹಿಳೆಯರಿಗೆ ಮಕ್ಕಳಿಗೆ ಪ್ರದರ್ಶಿಸಲಾಗುತ್ತಿತ್ತು.
ಸೌದಿ ಚಿತ್ರ ನಿರ್ದೇಶಕರಲ್ಲಿ ಅಬ್ದುಲ್ಲಾ ಅಲ್ ಮುದೈ ಸೆನ್, ಸಮೀರ ಅಜೀಜ್, ಗಿಗಿ ಹೊಜಿಮಾ, ಮೋಹನ್ ಅಬ್ದುಲ್ಲಾ, ಮಿಹ್ಮದ ಸಲ್ಮಾನ ಮೊದಲಾದವರು ಪ್ರಸಿದ್ಧಿ ಪಡೆದಿದ್ದು, ನಟನಟಿಯರಲ್ಲಿ ಫಾತಿಮಾ ಅಲ್ ಬನಾವಿ, ಹಿಂದ್ ಮಹ್ಮದ್, ರೀಮ್ ಅಬ್ದುಲ್ಲಾ, ಅಹದ್ ಕಮೆಟ್, ಅಹ್ಮದ ಖಲೀಲ್, ಮುಶಾರಿ ಹಿಲಾಲ್, ಹಿಶಾಮ್ ಫಗೀಹ್ ದೀನಾ ಶಿಹಾಬಿ ಮೊದಲಾದವರು ಹೆಸರು ಗಳಿಸಿದ್ದಾರೆ. ಕಿಫ್ ಅಲ್ ಹಾಲ್, ನಿಸಾ ಬಿಲ್ ಥಿಲ್( ನೆರಳುಗಳಿಲ್ಲದ ಮಹಿಳೆಯರು) , ಮೂರು ಪುರುಷರು ಮತ್ತು ಮಹಿಳೆ, ಕೊನೆಯ ದಿನ, ಸೂರ್ಯೋದಯ/ ಸೂರ್ಯಾಸ್ತ ಮೊದಲಾದ ಸಿನಿಮಾಗಳು ಜನಪ್ರಿಯವಾಗಿವೆ.
ಈಗಿನ ರಾಜನ ಅವಧಿಯಲ್ಲಿ ಸೌದಿ ಅರೇಬಿಯಾ ವ್ಯಾಪಕ ಬದಲಾವಣೆಗಳನ್ನು ಕಾಣುತ್ತಿದ್ದು , ಮಹಿಳೆಯರ ಮೇಲಿನ ಹಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.
ಸಾರ್ವಜನಿಕ ಮನೋರಂಜನೆ ಮುಕ್ತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಚಲನಚಿತ್ರ ಉದ್ಯಮ ಸಹ ಬೆಳೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

*ಎಲ್.ಎಸ್. ಶಾಸ್ತ್ರಿ, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ