ನಿಜಕ್ಕೂ ಅಚ್ಚರಿ ಹುಟ್ಟಿಸುವ ಮರುಭೂಮಿಯ ಈ ನಿಸರ್ಗ ರಮ್ಯ ದೃಶ್ಯಗಳು ಸತ್ಯವೋ ಸುಳ್ಳೋ ಎಂಬ ಸಂದೇಹವನ್ನು ಹುಟ್ಟಿಸಿದರೆ ಅದು ಸಹಜ. ನಾನಿಲ್ಲಿ ಹಾಕಿರುವ ಚಿತ್ರಗಳೆಲ್ಲ ಸೌದಿ ಅರೇಬಿಯಾದ ಕೆಲವು ಪರ್ವತ ಪ್ರದೇಶಗಳಲ್ಲಿರುವ ಹಳ್ಳಿಗಳ ದೃಶ್ಯ. ಬಹುಭಾಗ ಮರಳಿನಿಂದ ಕೂಡಿದ್ದರೂ ಸಹ ಕೆಲವು ಭಾಗಗಳಲ್ಲಿ ಈ ಹಸಿರು ತುಂಬಿದ ಹಳ್ಳಿಗಳನ್ನು , ಅಲ್ಲಿಯ ಕಾಡುಗಳನ್ನು, ಕರಷಿಭೂಮಿಗಳನ್ನು , ಜೇಡಿ ಮಣ್ಣಿನ ಮನೆಗಳನ್ನು, ಜಾನಪದ ಬದುಕನ್ನು ಕಾಣಬಹುದಾಗಿದೆ.
ಅನೇಕ ಹಳ್ಳಿಗಳನ್ನು ಇದಕ್ಕೆ ಉದಾಹರಿಸಬಹುದು. ಹಲವು ಹಳ್ಳಿಗಳಿಗೆ ಐತಿಹಾಸಿಕ ಮಹತ್ವವೂ ಇದೆ. ಫೈಫಾ, ಅಲ್ ನಮಾಸ್, ಅಲ್ ಅಬೀದ್, ರಿಜಾಲ್ ಆಲ್ಮಾ, ಅಲ್ ತಯೆಂಬತ್, ಅಲ್ ಜೌಫ್, ಜುಬ್ಬಾ, ಅಲ್ ಹಿಜ್ರ, ಅಲ್ ಅಹ್ಸಾ, ಅಲ್ ಖರ್ಜ್, ಅಲ್ ಖದಿಮ್ ಮೊದಲಾದ ಹಳ್ಳಿಗಳು ಹಸಿರು ಪರ್ವತಗಳಿಂದ ಆವೃತವಾಗಿದ್ದು ಇಲ್ಲಿಯ ಪ್ರಧಾನ ಉದ್ಯೋಗ ಕೃಷಿಯೇ ಆಗಿದೆ. ಬಗೆಬಗೆಯ ಗಿಡಮರ, ಔಷಧಿ ಗಿಡಮೂಲಿಕೆ ಸಸ್ಯಗಳಿಂದ ಕೂಡಿದ ಈ ಪ್ರದೇಶಗಳಲ್ಲಿ ವಿವಿಧ ಧಾನ್ಯ, ಜೇನುತುಪ್ಪ, ಸುಗಂಧಿತ ಸಸ್ಯಪ್ರಕಾರಗಳು, ಹೂವು ಹಣ್ಣು ತರಕಾರಿಗಳು ಬೆಳೆಯಲ್ಪಡುತ್ತವೆ.
ಎತ್ತರದ ಪರ್ವತಗಳಿಂದ ಕೂಡಿದ ಫೈಫಾದಲ್ಲಿ ಸಿಲಿಂಡರ್/ ವೃತ್ತಾಕಾರದ ಟೆರೇಸ್ ಗಳ ವಿಶಿಷ್ಟ ಕೃಷಿಪದ್ಧತಿ ಗಮನ ಸೆಳೆಯುತ್ತದೆ. ( ಮೂರನೆಯ ಚಿತ್ರ ನೋಡಿ).
ರಿಜಾಲ್ ಹಳ್ಳಿ ಹೆರಿಟೇಜ್ ವಿಲೇಜ್ ಎಂದೇ ಪ್ರಸಿದ್ಧವಾಗಿದ್ದು ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ ತುಂಬ ಆಕರ್ಷಕವಾಗಿದೆ. ಅಲ್ ತಯೆಂಬತ್ ಎಂಬಲ್ಲಿಯೂ ಅಂತಾರಾಷ್ಟ್ರೀಯ ಮ್ಯೂಸಿಯಮ ಇದೆ. ಪ್ರಾಚೀನ ಹಿಜಾಜಿ ಶೈಲಿಯ ಪುರಾತನ ಮನೆಗಳಿವೆ.
ಅಲ್ ನಮಾಸ್ ಎಂಬ ಹಳ್ಳಿ ಸರವತ್ ಪರ್ವತ ಶ್ರೇಣಿಯಲ್ಲಿದ್ದು ಅಸಿರ್ ಪ್ರಾಂತಕ್ಕೆ ಸೇರಿದ್ದು. ಇಲ್ಲಿ ಹಸಿರು, ಕಾಡು ಕಣಿವೆ, ಜಲಪಾತಗಳಿದ್ದು ಆಗಾಗ ಮಂಜು ಕವಿಯುವ ಮೂಲಕ ” ಮಬ್ಬಿನ ನಗರ” ಎಂದೂ ಹೇಳಲ್ಪಡುತ್ತದೆ. ( ನಾಲ್ಕನೆಯ ಚಿತ್ರ).
ಈ ಎಲ್ಲ ಹಳ್ಳಿಗಳು ಕೃಷಿಪ್ರಧಾನವಾದವು. ಮರುಭೂಮಿಯ ಒಂದು ಭಾಗವಾಗಿದ್ದರೂ ಅಲ್ಲಿಯ ವಾತಾವರಣ ಭಿನ್ನವಾಗಿದೆ. ಅವು ಮಳೆ ಹೆಚ್ಚು ಬೀಳುವ ಪ್ರದೇಶಗಳೂ ಹೌದು. ಪ್ರಾಚೀನ ಒಯೆಸಿಸ್ ಗಳಿಂದ ಕೂಡಿವೆ. ಅಲ್ಲಲ್ಲಿ ಹಳೆಯ ಕೋಟೆಗಳ ಅವಶೇಷಗಳೂ ಇವೆ. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳೆನಿಸಿವೆ. ಇಲ್ಲಿಯ ಹಳೆಯ ಮನೆಗಳ ವಾಸ್ತುಶಿಲ್ಪ , ವಿನ್ಯಾಸಗಳೇ ಬೇರೆಯಾಗಿದ್ದು ಮರಳು, ಕಲ್ಲು, ಜೇಡಿಮಣ್ಣು , ಸುಣ್ಣದ ಕಲ್ಲುಗಳಿಂದ ನಿರ್ಮಾಣವಾದ ವಿಶಿಷ್ಟ ರಚನೆಗಳಾಗಿವೆ.
ವಿಶಾಲ ಮರಳುಗಾಡಿನಲ್ಲಿ ಅಪರೂಪಕ್ಕೆ ಕಾಣಸಿಗುವ ಓಯಾಸಿಸ್ ಗಳಂತೆ ಈ ಗ್ರಾಮೀಣ ಪರಿಸರದ ಹಸಿರು ತುಂಬಿದ ಪ್ರದೇಶಗಳೂ ಅಚ್ಚರಿಯನ್ನೂ ಸಂತಸವನ್ನೂ ತರುವುದು ಮಾತ್ರ ನಿಜ.

*ಎಲ್.ಎಸ್.ಶಾಸ್ತ್ರಿ, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ