ಸೌದಿ ಅರೇಬಿಯಾ ಅಂದರೆ ಕೇವಲ ಮರಳುಗಾಡಲ್ಲ. ಅದಕ್ಕೆ ಹಲವು ಮುಖಗಳಿವೆ. ಅನೇಕ ಐತಿಹಾಸಿಕ ಕೋಟೆಗಳು, ಅರಮನೆಗಳು, ಪಾರಂಪರಿಕ ಹಳ್ಳಿಗಳು ( ಹೆರಿಟೇಜ್ ವಿಲ್ಲೇಜಸ್) , ಮ್ಯೂಸಿಯಂಗಳು , ನೈಸರ್ಗಿಕ ಪರಿಸರ ಮತ್ತು ಅತ್ಯಾಧುನಿಕ ನಿರ್ಮಾಣಗಳು ಎಲ್ಲವನ್ನೂ ನೋಡಬಹುದು.

ಸೌದಿಯ ಪ್ರಮುಖ ನಗರಗಳಲ್ಲಿ ಒಂದಾದ ಜೆಡ್ಡಾ “ಕೆಂಪು ಸಮುದ್ರದ ವಧು” ಎಂದೇ ಕರೆಯಲ್ಪಡುತ್ತದೆ. ಇಲ್ಲಿಯ ತೇಲುವ ಮಸೀದೆ ಮನೋಹರವಾಗಿದೆ.
ಸೌದಿ ರಾಜಧಾನಿ ರಿಯಾದ್ ಸುಂದರ , ಭವ್ಯ ಅರಮನೆ, ಕೋಟೆ, ಮ್ಯೂಸಿಯಂ ಗಳಿಂದ ಕೂಡಿದ್ದು ಇದು ಪ್ರಮುಖ ಆರ್ಥಿಕ ಕೇಂದ್ರವೂ ಆಗಿದೆ.
ಸಮಗ್ರ ಇಸ್ಲಾಂ ಧರ್ಮೀಯರ ಎರಡು ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ ಮದೀನಾಗಳಂತೂ ಸುಪ್ರಸಿದ್ಧ. ಇಲ್ಲಿಯ ಗ್ರೇಟ್ ಮಸೀದೆ, ಕಾಬಾ ಮತ್ತು ಪ್ರವಾದಿಯ ಸಮಾಧಿ ಸ್ಥಳಗಳು ಲಕ್ಷಗಟ್ಟಲೆ ಜನರನ್ನು ಆಕರ್ಷಿಸುತ್ತವೆ.
ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಹೆರಿಟೇಜ್ ವಿಲ್ಲೇಜ್ ಮ್ಯೂಸಿಯಂ, ತೈಲ/ ಪೆಟ್ರೋಲಿಯಂ ಉತ್ಪಾದನಾ ಕೇಂದ್ರಗಳಿಂದ ಕೂಡಿದ ದಮ್ಮಾಮ್ ಪೂರ್ವ ಪ್ರಾಂತದ ಅತಿದೊಡ್ಡ ಆಧುನಿಕ ನಗರ.
ಜುಬೇಲ್ ಜಗತ್ತಿನ ಅತಿದೊಡ್ಡ ಉದ್ಯಮ ನಗರ. ಸುಂದರ ಬೀಚುಗಳು, ಪೆಟ್ರೊಕೆಮಿಕಲ್ ಕಾರಖಾನೆಗಳೆಲ್ಲ ಇರುವ ಉತ್ತಮ ಆಧುನಿಕ ವ್ಯವಸ್ಥೆಯಿಂದೊಡಗೂಡಿದ ಪ್ರವಾಸಿ ತಾಣ.
ಬುರೈದಾ ಪ್ರಮುಖ ಕೃಷಿ ಕೇಂದ್ರವಾಗಿದ್ದು ಅತಿ ದೊಡ್ಡ ಸಾಗಣೆ ಕೇಂದ್ರಗಳಿಂದ ಕೂಡಿದೆ. ಕೃಷಿ ಸಂಶೋಧನಾ ಸಂಸ್ಥೆಗಳಿವೆ.
ಅಲ್ ಖೋಬರ್ ಆಧುನಿಕ ಸೌಕರ್ಯಗಳಿಗೆ, ಶಾಪಿಂಗ್ ಸೆಂಟರುಗಳಿಗೆ ಮತ್ತು ಸುಂದರ ಸಮುದ್ರ ತೀರದಿಮದ ಹೆಸರಾಗಿದ್ದು ಇತ್ರಾ ಮ್ಯೂಸಿಯಂ ಪ್ರೇಕ್ಷಣೀಯ. ಪೆಟ್ರೋಲ್ ಮತ್ತು ಮಿನರಲ್ ವಿಶ್ವವಿದ್ಯಾನಿಲಯವೂ ಇಲ್ಲಿದೆ.
ತೈಫ್ ನಗರ ಸುಂದರ ಪರ್ವತ ಪ್ರದೇಶ ಮತ್ತು ಪ್ರಾಚೀನ ಐತಿಹಾಸಿಕ ಅರಮನೆ, ವಸ್ತು ಸಂಗ್ರಹಾಲಯಗಳಿಂದೊಡಗೂಡಿದೆ.
ರಿಜಾಲ್ ಹೆರಿಟೇಜ್ ವಿಲ್ಲೇಜ್ ವಿಶಿಷ್ಟ ವಿನ್ಯಾಸದ ಪುರಾತನ ಕಟ್ಟಡಗಳಿಂದ ಕೂಡಿದ್ದು ಇಲ್ಲಿಯ ಮ್ಯೂಸಿಯಂ ಬಹಳ ಪ್ರಸಿದ್ಧ.
ಬಹುದೊಡ್ಡ ಒಯಾಸಿಸ್ ಪ್ರದೇಶ ವಾಗಿರುವ ಅಲ್ ಅಹ್ಸಾ ಸಹ ನೋಡಲೇಬೇಕಾದ ಸ್ಥಳವಾಗಿದೆ . ಸಾವಿರಾರು ಎಕರೆ ಖರ್ಜೂರ ತಾಳೆ ಮರಗಳಿಂದ ಕೂಡಿದ ನಿಸರ್ಗ ರಮ್ಯ ಸ್ಥಳ.

*ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ