ಸುಮಾರು 6೦ ದಿವಸಗಳ ಸೌದಿ ಅರೇಬಿಯಾ ಪ್ರವಾಸದ ಕುರಿತು ಬರೆಯುತ್ತ 55 ಕಂತು ಬರೆದಿದ್ದೆ. ನಿಗದಿತ ಹತ್ತು ದಿವಸಗಳಿನ್ನೂ ಬಾಕಿ ಇದ್ದವು. ಎಲ್ಲರಿಗೂ ತಿಳಿದಿರುವಂತೆ ಕೇಳಬಾರದಂತಹ ಸುದ್ದಿ ಕೇಳಿ ಎಷ್ಟು ಉತ್ಸಾಹದಿಂದ ಹೋಗಿದ್ದೆವೋ ಅದಕ್ಕಿಂತ ಹೆಚ್ಚು ನಿರುತ್ಸಾಹದಿಂದ ಬೆಂಗಳೂರಿಗೆ ಮರಳಿದೆವು.
ನೋಡಬೇಕಾದ್ದನೆಲ್ಲ ನೋಡಿದ್ದೆವು. ಬರೆಯುವುದು ಮಾತ್ರ ಒಂದಿಷ್ಟು ಉಳಿದುಬಿಟ್ಟಿತು. ಮುಂದೆ ಪುಸ್ತಕ ರೂಪದಲ್ಲಿ ಹೊರತರುವಾಗ ಹೆಚ್ಚಿನ ವಿಷಯಗಳನ್ನು ಸೇರಿಸುತ್ತೇನೆ. ಈಗ ಬರೆಯುವ ಯಾವ ಉತ್ಸಾಹವೂ ಉಳಿದಿಲ್ಲ.

ಏನೇ ಇದ್ದರೂ “ಮರಳೂರಿನಿಂದ” ಮರೆಯಲಾಗದ ಸಾಕಷ್ಟು ನೆನಪುಗಳನ್ನು ಹೊತ್ತು ಬಂದಿದ್ದೇನೆ. ಆ ದೇಶದ ಆಂತರಿಕ ಸಂಗತಿಗಳೇನೇ ಇರಲಿ, ಸೌದಿ ಅರೇಬಿಯಾ ಪ್ರವಾಸ ಅನೇಕ ಸುಂದರ/ ಹೊಸ ಅನುಭವಗಳನ್ನು ಕೊಟ್ಟಿದೆ. ನಾವಿದ್ದ ಜುಬೇಲ್ ನ ನೆಸ್ಮಾ ವಿಲ್ಲೇಜ್ ಅರಬ್ ನೆಲದಲ್ಲಿದ್ದರೂ ಭಾರತೀಯ ವಾತಾವರಣವನ್ನೇ ಕಟ್ಟಿಕೊಟ್ಟಿತು. ನಮ್ಮನ್ನು ಪ್ರೀತಿಯಿಂದ, ಆತ್ಮೀಯತೆಯಿಂದ ನೋಡಿಕೊಂಡ ನೆಸ್ಮಾದ ಆ ಕುಟುಂಬದವರೆಲ್ಲರ ಬಗ್ಗೆ ಬರೆಯುವುದಿದೆ. ಸೌದಿಯ ಕೆಲವು ಒಳನೋಟಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದಿದೆ. ಭಾರತ ಮತ್ತು ಸೌದಿ ದೇಶಗಳನ್ನು ತುಲನಾತ್ಮಕವಾಗಿ ನೋಡಿದಾಗ ನನಗನಿಸಿದ್ದೇನು ಎನ್ನುವುದನ್ನೂ ಹೇಳಬೇಕಾಗಿದೆ. ಈತನಕ ನನ್ನ ಪ್ರವಾಸ ಕಥನವನ್ನು ಓದಿ ಖುಷಿ ಪಟ್ಟು ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞನಿದ್ದೇನೆ.

✒️ಎಲ್.ಎಸ್.ಶಾಸ್ತ್ರಿ, ಬೆಳಗಾವಿ