ಬೆಳಗಾವಿ : ಕನ್ನಡ ಭಾಷೆ ಹೆಚ್ಚು ಬಳಸುತ್ತಿರುವವರು ಜನಸಾಮಾನ್ಯರು. ಅವರಿಂದ ಕನ್ನಡ ಭಾಷೆ ಶಕ್ತಿಯುತವಾಗಿ, ಸಮೃದ್ಧವಾಗಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕುವೆಂಪು ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ಒಂದು ಭಾಷೆ ಬಳಕೆಯಲ್ಲಿದ್ದಾಗ ಮಾತ್ರ ಬೆಳೆಯುತ್ತದೆ. ಬಳಕೆ ತಪ್ಪಿದರೆ ಹೊರಟು ಹೋಗುತ್ತದೆ. ಪ್ರತಿಯೊಂದು ಭಾಷೆಯೂ ಬೆಳೆಯುವುದು ಕೊಡುಕೊಳ್ಳುವಿಕೆಯಿಂದ. ಯಾವ ಭಾಷೆಯ ಪದಗಳನ್ನು ಕೃತಕವಾಗಿ ತಂದು ಭಾಷೆಯಲ್ಲಿ ಬಳಸಬಾರದು. ಅದು ಸಹಜವಾಗಿ ಭಾಷೆಯಲ್ಲಿ ಬೆರೆಯುವಂತಿದ್ದರೆ, ಅದರ ಜಾಯಮಾನಕ್ಕೆ ಒಗ್ಗುವಂತಿದ್ದರೆ ಬಳಸಬೇಕು. ಹೊರಗಿನಿಂದ ಬಂದ ಪದಗಳು ಸೇರಿದ ಭಾಷೆಯ ಸೌಂದರ್ಯ, ಕಾಂತಿಯನ್ನು ಹೆಚ್ಚಿಸುವಂತಿರಬೇಕು. ಪ್ರಾಚೀನ ಕಾಲದಿಂದಲೂ ಕನ್ನಡ ಆ ಮಾರ್ಗದಲ್ಲಿಯೇ ಸಾಗಿ ಬಂದಿದೆ. ಇಂದು ಕೂಡ ಅದು ಮುಂದುವರಿದಿದೆ. ಈ ರೀತಿ ಒಳಗೊಳ್ಳುವ ಪ್ರಕ್ರಿಯೆಯಿಂದ ಭಾಷೆ ಸಶಕ್ತವಾಗಿ ಬೆಳೆಯುತ್ತದೆ. ಕನ್ನಡಕ್ಕೆ ಒಳಗೊಳ್ಳುವ ಗುಣ ಪ್ರಾಚೀನಕಾಲದಿಂದ ಇಂದಿನವರೆಗೂ ಇದೆ.

ಕನ್ನಡದ ಕವಿಗಳು ಈ ನೆಲದ ಸಹಬಾಳ್ವೆ, ಸಮಾನತೆ, ಸೌಹಾರ್ದತೆ, ಭಾಷಿಕ , ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿವೇಕತೆಯನ್ನು ಅತ್ಯಂತ ಸಮರ್ಥವಾಗಿ ತಿಳಿಸಿದ್ದಾರೆ. (ಭಾಷೆಯ ಮುಖಾಂತರ ಜನರನ್ನು ನೋಡುವುದಕ್ಕಿಂತ ಜನರ ಮುಖಾಂತರ ಭಾಷೆಯನ್ನು ನೋಡುವುದು ಹೆಚ್ಚು ಸೂಕ್ತವಾದುದು. ಮೊದಲು ಕನ್ನಡಿಗರನ್ನು ಉಳಿಸಿ, ಕನ್ನಡ ಉಳಿಯುತ್ತದೆ. ಅದಕ್ಕೆ ಬೇಕಾದ ಭಾಷಾನೀತಿ ರೂಪಿಸಬೇಕು. ಕನ್ನಡಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ ಸಿಗಬೇಕು. ಅನ್ನವನ್ನು ಸಂಪಾದಿಸುವ ವಾತಾವರಣ ನಿರ್ಮಾಣವಾದಾಗ ಜನ ಕನ್ನಡವನ್ನು ಯಾಕಾಗಿ ಮರೆಯುತ್ತಾರೆ.)

ಕೈಗಾರಿಕೀಕರಣದಿಂದ ಸಾಮೂಹಿಕ ಉತ್ಪಾದನೆಯಾದರೆ, ಜಾಗತೀಕರಣದಿಂದ ಬಂದ ಮಾಹಿತಿ ತಂತ್ರಜ್ಞಾನ ಸಾಮೂಹಿಕ ಉತ್ಪಾದನೆಯಲ್ಲ. ಅದು ಶಿಕ್ಷಣದ ಮೇಲೆ, ನಮ್ಮ ಮನೋಧರ್ಮದ ಮೇಲೆಯೂ ಪರಿಣಾಮ ಬೀರಿತು. ಕೇವಲ ಗಣಕಯಂತ್ರದ ಜೊತೆಗೆ ವ್ಯವಹಾರವಾಯಿತು. ಸಾಮೂಹಿಕ ಪ್ರಜ್ಞೆಯಿಂದ ವ್ಯಕ್ತಿ ಪ್ರಜ್ಞೆ ಕಡೆಗೆ ವಾಲಿತು. ಇದಕ್ಕೆ ನಮ್ಮ ಆರ್ಥಿಕ ನೀತಿಯೂ ಕಾರಣ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸುಂದರ್ ರಾಜ್ ಅರಸು ಅವರು ಶಿಕ್ಷಕರಾದವರು ಜ್ಞಾನ ಬುತ್ತಿಯನ್ನು ತುಂಬಿದವರಾಗಿರಬೇಕು. ಆಗ ವಿದ್ಯಾರ್ಥಿಗಳು ಅಯಸ್ಕಾಂತದಂತೆ ಆಕರ್ಷಿಸುತ್ತಾರೆ. ವಿದ್ಯಾರ್ಥಿಗಳು ಅವರಿಗೆ ಗೌರವ ನೀಡುತ್ತಾರೆ. ಅವರಿಂದ ಜ್ಞಾನವನ್ನು ಪಡೆಯಲು ಹಾತೊರೆಯುತ್ತಾರೆ. ಉತ್ತಮ ವ್ಯಕ್ತಿಗಳ ಸಂಸರ್ಗದಿಂದ ನಮ್ಮ ಬದುಕು ಬದಲಾಗುತ್ತದೆ. ಬರಗೂರು ಅವರು ಇಲ್ಲದವರ ಕುರಿತು ಸದಾ ಚಿಂತಿಸುತ್ತಾರೆ. ಅವರಲ್ಲಿ ಬಂದವರು ಬದಲಾವಣೆಯಾಗಿಯೇ ಮರಳುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ವಿಶ್ವವಿದ್ಯಾಲಯದಲ್ಲಿ ಕನ್ನಡದ ವಾತಾವರಣ ಸದಾ ಅನುರಣಿಸಬೇಕೆಂಬ ಕಾರಣದಿಂದ ನವೆಂಬರ್ ತಿಂಗಳ ಪೂರ್ತಿ ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಅಳಿವಿನಂಚಿನಲ್ಲಿವೆ. ನಮ್ಮ ಭಾಷೆ ಉಳಿಸಿ , ಬೆಳೆಸಬೇಕಾದವರು ನಾವು. ಹಾಗಾಗಿ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ನಮಗೆ ಸದಾ ಹೆಮ್ಮೆ ಇರಬೇಕು. ನಮ್ಮ ನೆಲ, ಜಲ, ಪರಿಸರದ ಪ್ರತಿಯೊಂದು ಸಜೀವ-ನಿರ್ಜೀವ ವಸ್ತುಗಳಲ್ಲಿ ಭಾಷೆ ಅಡಗಿದೆ.

ಅಧ್ಯಯನ, ಅಧ್ಯಾಪನಕ್ಕೆ ಪ್ರತಿಯೊಬ್ಬ ಶಿಕ್ಷಕನು ಮೊದಲ ಆದ್ಯತೆ ನೀಡಬೇಕು. ಮುಂದೆ ಬರುವ ಜನಾಂಗವನ್ನು ಸಮರ್ಥವಾಗಿ ಸೃಷ್ಟಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜನಸಾಮಾನ್ಯರ ಬದುಕು ಬದಲಾಗಬೇಕು. ವರ್ತಮಾನದ ಸಮಸ್ಯೆ ಭವಿಷ್ಯದಲ್ಲಿ ಇರಬಾರದು ಎಂಬುದು ಬರಗೂರು ಅವರ ಆಸೆಯಾಗಿದೆ ಎಂದರು.

ರಾಚವಿ ಕುಲಸಚಿವ ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಉಪಸ್ಥಿತರಿದ್ದರು.

ಡಾ. ಗಜಾನನ ನಾಯ್ಕ ನಿರೂಪಿಸಿದರು, ಪ್ರೊ. ಎಂ. ಸಿ. ಎರಿಸ್ವಾಮಿ ಸ್ವಾಗತಿಸಿದರು, ಡಾ. ಕನಕಪ್ಪ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.