ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ದೇಶದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಮತ್ತು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಅವರ ಜತೆ ಸಮಾಲೋಚನೆ ಬಳಿಕ 74 ವರ್ಷದ ಸಾವಿತ್ರಿ ಜಿಂದಾಲ್‌ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಬೆಂಬಲಿತ ಶಾಸಕರ ಸಂಖ್ಯೆ 51ಕ್ಕೆ ಏರಿದೆ. ಬಿಜೆಪಿಯೊಂದೇ 48 ಸ್ಥಾನಗಳನ್ನು ಗೆದ್ದಿದೆ.

ಸ್ವತಂತ್ರ ಅಭ್ಯರ್ಥಿಗಳಾದ ದೇವೇಂದರ ಕಡ್ಯಾನ್‌ ಮತ್ತು ರಾಜೇಶ ಜೂನ್‌ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ ಇತರ ಇಬ್ಬರು ಸ್ವತಂತ್ರ ಶಾಸಕರಾಗಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದ ದೇವೇಂದರ್‌ ಕಡ್ಯಾನ್‌ ಪಕ್ಷ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ನಾಯಕ ರಾಜೇಶ ಜೂನ್‌ ಪಕ್ಷದ ವಿರುದ್ಧ ಬಂಡಾಯವೆದ್ದು ಕಣಕ್ಕೆ ಧುಮುಕಿದ್ದರು.