ಬೆಳಗಾವಿ :
ರಾಜ್ಯದ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಬೇಕು. ಒಂದು ಕಾಲದಲ್ಲಿ ದೇಶದಲ್ಲಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಸಂದರ್ಭವಿತ್ತು. ಆದರೆ ಈಗ ಕಬ್ಬು ಬೆಳೆ ದೇಶದ ಆರ್ಥಿಕತೆಗೆ ನೆರವಾಗುವ ಪ್ರಮುಖ ಬೆಳೆಯಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ (ಡಿ.22) ನಡೆದ “ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ 2022-23 ನೇ ಸಾಲಿನ ಹಂಗಾಮು” ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನ ವೈಜ್ಞಾನಿಕ ಕ್ರಾಂತಿಯಲ್ಲಿ ಕಬ್ಬು ಬೆಳೆಯ ಪಾತ್ರ ಸಾಕಷ್ಟಿದೆ. ಇನ್ನು ಸುಮಾರು 100 ವರ್ಷಗಳ ಕಾಲ ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಭವಿಷ್ಯವಿದೆ. ಕಾರ್ಖಾನೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಕ್ಕಿವೆ. ಈ ಉದ್ದಿಮೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 25 ಸಾವಿರ ಕೋಟಿಯಿಂದ 35 ಸಾವಿರ ಕೋಟಿಯವರೆಗೆ ಆದಾಯವಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಕಬ್ಬು ಬೆಳೆ ಬೆಳೆಯುವುದರಲ್ಲಿ ರಾಜ್ಯ ಈಗ 2 ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನದಲ್ಲಿ ಮೊದಲ ಸ್ಥಾನ ಅಲಂಕರಿಸಲಿದ್ದೇವೆ ಎಂದರು.

ವೈಜ್ಞಾನಿಕ ಪದ್ಧತಿ ಅಳವಡಿಕೆಗೆ ಪ್ರಯತ್ನಿಸಲು ಪ್ರೋತ್ಸಾಹ ನೀಡಿ:

ರೈತನಿಗೆ ಹೆಚ್ಚಿನ ಆದಾಯ ನೀಡುವುದು ಕಬ್ಬು ಬೆಳೆ ಮಾತ್ರ. ರೈತರು ಪಾರಂಪರಿಕ ಕೃಷಿ ಹೊರತುಪಡಿಸಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಬೇಕು. ಒಂದು ಎಕರೆಗೆ 5 ಟನ್ ಕಬ್ಬು ಬೆಳೆ ಬೆಳೆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಇಂತಹ ಪ್ರಯತ್ನಕ್ಕೆ ರೈತರು ಮುಂದಾಗುವಂತೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳು ಹಾಗೂ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಮನ್ವಯ, ಸಾಮರಸ್ಯದಿಂದ ರೈತರಿಗೆ ಕಬ್ಬಿನ ಬೆಳೆಗೆ ರೈತರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು.

ವಿದ್ಯಾರ್ಥಿಗಳು ಪ್ರಾಯೋಗಿಕ ಅಭ್ಯಾಸಕ್ಕೆ ಒತ್ತು ನೀಡಿ:

ಮೊದಲಿನಿಂದಲೂ ದೇಶಕ್ಕೆ ರೈತನ ಕೊಡುಗೆ ಅಪಾರವಾಗಿದೆ. ಔದ್ಯೋಗಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶಕ್ಕೆ ಕೊಡುಗೆ ನೀಡುವ ಕಾರ್ಯಕ್ಕೆ ಕಾರ್ಖಾನೆಗಳು ಮುಂದಾಗಬೇಕು. ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ ಪಠ್ಯ ಕ್ರಮ ಅನುಸರಿಸದೆ ರೈತರ ಬೆಳೆದ ವಿವಿಧ ಕಬ್ಬು ಬೆಳೆಗಳ ಕುರಿತು ಪ್ರಾಯೋಗಿಕವಾಗಿ ಅಭ್ಯಾಸಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.

ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರದಾನ:

ಬಾಗಲಕೋಟೆಯ ಸಮಿರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಗಳಿಗೆ ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಾಯುವ್ಯ ವಲಯದಲ್ಲಿ ರಾಯಬಾಗ ತಾಲೂಕಿನ ಸಂವದತ್ತಿಯ ಶಿವಶಕ್ತಿ ಶುಗರ್ಸ್, ಸಂಕೊನಟ್ಟಿಯ ಕೃಷ್ಣ, ಮುನವಳ್ಳಿ ರೇಣುಕಾ ಶುಗರ್ಸ್ ಕಾರ್ಖಾನೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ, ಪ್ರಶಸ್ತಿ ನೀಡಲಾಯಿತು.

ಈಶಾನ್ಯ ವಲಯದಲ್ಲಿ ಕಲಬುರ್ಗಿ ಜಿಲ್ಲೆಯ ಕೆ.ಪಿ.ಆರ್ ಶುಗರ್ಸ್ ಮತ್ತು ದಿ ಮಹಾತ್ಮ ಗಾಂಧಿ ಎಸ್.ಎಸ್.ಕೆ.ಎನ್ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಹಾಗೂ ಪ್ರಶಸ್ತಿ ವಿತರಿಸಲಾಯಿತು.

ದಕ್ಷಿಣ ಮತ್ತು ಮಧ್ಯ ವಲಯದಲ್ಲಿ ಗದಗ ಜಿಲ್ಲೆಯ ವಿಜಯನಗರ ಶುಗರ್ಸ್, ಮಂಡ್ಯ ಜಿಲ್ಲೆಯ ಕೊರಮಂಡಲ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿಗೆ ಪ್ರಥಮ, ದ್ವಿತೀಯ ಪ್ರಶಸ್ತಿ ನೀಡಲಾಯಿತು.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ :

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದು ರ್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸುಪ್ರೀತ್ ಪಿರಗನ್ನವರ ಪ್ರಥಮ ಸ್ಥಾನ, ಸುರಜಸಿಂಗ್ ಚೊಪದಾರ ದ್ವಿತೀಯ ಸ್ಥಾನ ಹಾಗೂ ಅಭಿನಂದನ್ ಪಾಟೀಲ ತೃತೀಯ ಪ್ರಶಸ್ತಿ ವಿತರಿಸಲಾಯಿತು.

ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಶಿವಲಿಂಗ ಮೇತ್ರಿ, ಮಂಜುನಾಥ ಬುದ್ನಿ, ಸೌರಭ ಶೆಟ್ಟಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಗುರುನಾಥ ಕುಂಡೇಕರ, ರಾಹುಲ್ ಸೊರಗಾವಿ, ಸೌರಭ ಪಾಟೀಲಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ನೀಡಲಾಯಿತು.

ಎಂಎಸ್ಸಿ ವಿದ್ಯಾರ್ಥಿಗಳಾದ ಬಾಳಯ್ಯ ಪೂಜಾರ ಪ್ರಥಮ, ಹರೀಶ ಕಣಕರೆಡ್ಡಿ ದ್ವಿತೀಯ, ಕೃಷ್ಣಾ ರಾಠೋಡ ಅವರಿಗೆ ತೃತೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಳಗಾವಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಡಾ. ಆರ್. ಬಿ ಖಾಂಡಗಾವೆ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ರಮೇಶ ಪಟ್ಟಣ, ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಎಂ. ರವಿಕುಮಾರ, ಆಡಳಿತ ಮಂಡಳಿಯ ಸದಸ್ಯ ಅಜೀತ ದೇಸಾಯಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ವ್ಯವಸ್ಥಾಪಕರು ಸಿಬ್ಬಂದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.