ಬೆಂಗಳೂರು :
ರಾಜ್ಯಾದ್ಯಂತ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜನವರಿ 16ರಿಂದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸೂಚನೆ ನೀಡಿದೆ. ಆದರೆ, ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಮಟ್ಟದಲ್ಲಿಯೇ ಸಿದ್ಧಪಡಿಸಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದೆ.
ಪ್ರಶ್ನೆಪತ್ರಿಕೆ ಲೀಕ್‌ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ನೀಡಿದೆ. ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜ.16ರಿಂದ 30ರ ವರೆಗೆ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಜಿಲ್ಲಾ ಹಂತದಲ್ಲಿ ನಡೆಸಬೇಕು ಎಂದು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಾಂಡಳಿ ಸೂಚಿಸಿದೆ.

ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಜಿಲ್ಲಾ ಮಟ್ಟದಲ್ಲಿ ವೇಳಾಪಟ್ಟಿ ಹಾಗೂ ಮಂಡಳಿ ನಿರ್ದೇಶನದಂತೆ ಪ್ರಾಯೋಗಿಕ ಪರೀಕ್ಷೆ ಹೊಂದಿರುವ ವಿಷಯಗಳಲ್ಲಿ 70 ಅಂಕಗಳಿಗೆ ಮತ್ತು ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 80 ಅಂಕಗಳಿಗೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನೀಲನಕ್ಷೆಗಳ ಆಧಾರದ ಮೇಲೆ ವಿಭಾಗ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿಕಾ ತರಬೇತಿ ಹೊಂದಿದ ಉಪನ್ಯಾಸಕರಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು. ಪರೀಕ್ಷಾ ಗೌಪ್ಯತೆಯನ್ನು ಕಾಪಾಡಬೇಕು ಎಂದು ಮಂಡಳಿ ಸೂಚನೆ ನೀಡಿದೆ.

2023-24ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್‌ 2ರಿಂದ 22ರ ವರೆಗೆ ನಡೆಸುವ ಬಗ್ಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಮಂಡಳಿ ಪ್ರಕಟಿಸಿದೆ. ಶೀಘ್ರದಲ್ಲಿಯೇ ಅಂತಿಮ ವೇಳಾಪಟ್ಟಿಯೂ ಬಿಡುಗಡೆ ಆಗಲಿದೆ.