ರಾಯ್ಪುರ: ಛತ್ತೀಸ್ಗಡದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಈ ಎನ್ಕೌಂಟರ್ ನಡೆದಿದ್ದು, ಈ ವೇಳೆ ಹತ ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ನಕ್ಸಲೀಯರು ಒಡಿಶಾ ಮೂಲಕ ಛತ್ತೀಸ್ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಕಾರ್ಯಾಚರಣೆ ಆರಂಭಿಸಿದೆ. ಇಂದು, ಶುಕ್ರವಾರ ಬೆಳ್ಳಂ ಬೆಳಗ್ಗೆ ಸುಕ್ಮಾ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ 10 ಮಾವೋವಾದಿಗಳನ್ನು ಭದ್ರತಾ ಪಡೆ ಎನ್ಕೌಂಟರ್ ಮಾಡಿದೆ ಎಂದು ಬಸ್ತಾರ್ ಇನ್ಸ್ಪೆಕ್ಟರ್-ಜನರಲ್ ಆಫ್ ಪೋಲೀಸ್ ಪಿ ಸುಂದರರಾಜ ತಿಳಿಸಿದ್ದಾರೆ.
ಕಳೆದ ತಿಂಗಳು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 30ಕ್ಕೂ ಅಧಿಕ ಮಾವೋವಾದಿಗಳು ಹತರಾಗಿದ್ದರು. ಅಕ್ಟೋಬರ್ 4 ರಂದು ಛತ್ತೀಸ್ಗಢದ ನಾರಾಯಣಪುರ- ದಾಂತೇವಾಡ ಗಡಿ ಅರಣ್ಯ ಪ್ರದೇಶದಲ್ಲಿ ದಾಳಿ ಮಾಡಲು ಸಂಚು ರೂಪಿಸುತ್ತಿದ್ದ 30 ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದೆ. ಆಗ ಎಕೆ ಸರಣಿ ರೈಫಲ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವಾರು ಅಸಾಲ್ಟ್ ರೈಫಲ್ಗಳನ್ನು ನಕಲ್ಸರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.