
ಉಡುಪಿ: ಐದು ವರ್ಷದ ಬಾಲಕಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಶುಕ್ರವಾರ ಸಂಜೆ ನಗರದ ಪ್ರತಿಷ್ಠಿತ ಕಾಲೇಜು ಬಳಿ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.
ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯೋರ್ವನ ಕೃತ್ಯ ಇದಾಗಿದ್ದು, ಆರೋಪಿಯ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ.
ಮಗುವಿನ ಪೋಷಕರ ತರಕಾರಿ ಅಂಗಡಿ ಸಮೀಪವೇ ಕೃತ್ಯ ನಡೆದಿದ್ದು, ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದ ಈಕೆಗೆ ಚಾಕಲೇಟ್ ಆಸೆ ತೋರಿಸಿದ ಆರೋಪಿ, ಆಕೆಯನ್ನು ಅಂಗಡಿ ಪಕ್ಕದ ಕಾಲುದಾರಿಯಲ್ಲಿ ಕರೆದುಕೊಂಡು ಹೋಗಿ ದಾರಿ ಬದಿಯ ಬೇಲಿ ಪಕ್ಕದಲ್ಲಿ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಬಾಲಕಿಯನ್ನು ಹುಡುಕಿಕೊಂಡು ಬಂದ ಇನ್ನೋರ್ವ ಬಾಲಕಿಯನ್ನು ಕಂಡು ಪರಾರಿಯಾಗಿದ್ದಾನೆ.
ಆತ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಪೋಷಕರಲ್ಲಿ ತಿಳಿಸಿದ್ದು, ಆ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಶೋಧ ಕಾರ್ಯದಲ್ಲಿದ್ದಾರೆ.
ನಗರದಲ್ಲಿ ನಡೆದ ಅಮಾನವೀಯ ಕೃತ್ಯ ಕೇಳಿ ಜನತೆ ಬೆಚ್ಚಿ ಬಿದ್ದಿದ್ದಾರೆ.