ದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಂದಿನ 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಕಳೆದ 10 ವರ್ಷಗಳ ಕಾಲ ಪ್ರಧಾನಿ ಮೋದಿ ಸಾರಥ್ಯದ ಕೇಂದ್ರದ ಎನ್ಡಿಎ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳ ಗುಣಗಾನ ಮಾಡಿದ ಅಮಿತ್ ಶಾ, ಮುಂದಿನ 10 ವರ್ಷವೂ ಪ್ರಧಾನಿ ಮೋದಿ ಅವರೇ ಆಳ್ವಿಕೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದಲ್ಲಿ ಪ್ರಜಾಪ್ರಭುತ್ವ ಕ್ರಿಯಾತ್ಮಕವಾಗಿದೆ, ಜನರು ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಮತ ನೀಡುತ್ತಾರೆ. ಈ ಹಿಂದೆ ಜನರ ನಿರ್ಧಾರಗಳು ಜಾತ್ಯಾಧಾರಿತ ಹಾಗೂ ಧರ್ಮಾಧಾರಿತವಾಗಿ ಇರುತ್ತಿದ್ದವು. ಓಲೈಕೆ ರಾಜಕಾರಣ ಇರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಜನರು ಅಭಿವೃದ್ದಿ ಆಧರಿತವಾಗಿ ಮತ ಹಾಕುತ್ತಾರೆ. ಈ ಒಂದು ರಾಜಕೀಯ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ಹುಟ್ಟು ಹಾಕಿದ್ದಾರೆ ಎಂದು ಅಮಿತ್ ಶಾ ಹೇಳಿದರು.