ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಬಿಡು ಇಲ್ಲದ ಕೆಲಸ ಕಾರ್ಯಗಳ ನಡುವೆಯೂ ಇದೀಗ ಬಹುದಿನಗಳ ಬಯಕೆಯೊಂದನ್ನು ಈಡೇರಿಸಿಕೊಂಡಿದ್ದಾರೆ. ಮಲೆನಾಡು ಗಿಡ್ಡ ಪ್ರಭೇದದ ಹಸುವನ್ನು ಸಾಕುವ ತಮ್ಮ ಬಹುದಿನಗಳ ಕನಸನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ. ಈ ಮೂಲಕ ತಾವು ಒಬ್ಬರು ಗೋಪ್ರೇಮಿ ಎಂದು ಸಾಬೀತುಪಡಿಸಿದ್ದಾರೆ.

ಸುಳ್ಯದ ಆಳ್ವಾರ ಫಾರ್ಮ್ ನಿಂದ ಮಲೆನಾಡ ಗಿಡ್ಡ ತಳಿಯ ಹಸುವನ್ನು ಕರೆ ತಂದಿದ್ದಾರೆ. ಮುಖ್ಯ ಕಾರ್ಯದರ್ಶಿಗಳ ನಿವಾಸಕ್ಕೆ ಹೊರಡುವ ಮುನ್ನವೇ ಆಳ್ವಾರ ಫಾರ್ಮ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಕರೆತರಲಾಗಿದೆ. ಶಾಲಿನಿ ರಜನೀಶ್ ಮನೆಗೆ ಆಗಮಿಸುತ್ತಿದ್ದಂತೆ ಮಲೆನಾಡು ಗಿಡ್ಡಗಳಿಗೆ ಶಾಲಿನಿ ರಜನೀಶ್ ಮುಂದೆ ನಿಂತು ಸ್ವತಃ ಅವರೇ ಗೋಪೂಜೆ ನೆರವೇರಿಸಿ ಭಕ್ತಿ ಭಾವ ಮೆರೆದಿದ್ದಾರೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಹಾಲಿ ಸಿಎಸ್ ಶಾಲಿನಿ ರಜನೀಶ್ ದಂಪತಿ ಕೋರಿಕೆಯಂತೆ ಅವರ ಮನೆಗೆ ಮಲೆನಾಡು ಗಿಡ್ಡ ‘ಹಂಸಿ, ಪಂಚಮಿ’ ಎಂಬ ಗೋವುಗಳು ಮತ್ತು ಕರುವಿನೊಂದಿಗೆ ಬಂದಿದ್ದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಾದ ಪ್ರಸನ್ನ ಹೆಬ್ಬಾರ್, ನಿತಿನ್ ಪ್ರಭು ಮತ್ತಿತರ ಸಾಗಣೆ ವ್ಯವಸ್ಥೆ ಮಾಡಿದ್ದಾರೆ. ಸುಳ್ಯ ತಾಲೂಕು ಅಲೆಕ್ಕಾಡಿಯ ಫಾರ್ಮ್‌ನ ಒಡೆಯರಾದ ಅಕ್ಷಯ ಆಳ್ವರ ಸಂತೋಷದಿಂದಲೇ ಕಪಿಲ ತಳಿಯ ಮಲೆನಾಡು ಗಿಡ್ಡ ಗೋವು, ಕರುವನ್ನು ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಕಡಿಮೆ ಹಾಲು ಕೊಟ್ಟರೂ ಔಷಧೀಯ ಗುಣವುಳ್ಳದ್ದಾಗಿದೆ. ಸೆಗಣಿಯು ಜಮೀನಿನ ಆರೋಗ್ಯ ರಕ್ಷಕ ಮತ್ತು ಗೋಮೂತ್ರದಿಂದ ಅನೇಕ ಪ್ರಯೋಜನಗಳಿವೆ. ಈ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ವಿನಾಶದ ಅಂಚಿನಲ್ಲಿರುವ ಮಲೆನಾಡು ಗಿಡ್ಡ ಗೋವು ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಸದಾಶಿವ ಮರಿಕೆ, ಅಕ್ಷಯ್ ಆಳ್ವ ಮುಂತಾದವರು ಆಂದೋಲನವನ್ನೇ ಪ್ರಾಂತದಲ್ಲಿ ಕೈಗೆತ್ತಿಕೊಂಡಿದ್ದಾರೆ.
ಸಿಎಸ್‌ ಶಾಲಿನಿ ರಜನೀಶ್ ಸ್ವಯಂ ಆಸಕ್ತಿವಹಿಸಿ ಈ ಗೋವು ತರಿಸಿಕೊಂಡಿರುವ ಕಾರಣ ಸಂರಕ್ಷಣಾ ಆಂದೋಲನಕ್ಕೆ ಹೊಸ ಬಲ ತುಂಬಲಿದೆ. ಅಮೂಲ್ಯವಾದ ಮಲೆನಾಡು ಗಿಡ್ಡ ತಳಿಯು ಪ್ರತಿ ಮನೆಗೆ ಕಾಲಿಡಲಿವೆ ಎಂಬ ಅಶಾಭಾವನೆಯು ಗರಿಗೆದರಿದೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ದೇಶಿತಳಿಯನ್ನು ಸಾಕಲು ಮುಂದಾಗಿರುವುದರಿಂದ ಮುಂದಿನ ದಿನದಲ್ಲಿ ದೇಶಿ ಹಸುಗಳ ಸಂವರ್ಧನೆಗೆ ಸಹಾಯವಾಗಲಿದೆ ಎಂದು ಗೋವು ಪ್ರೇಮಿಗಳು
ಆಶಯ ವ್ಯಕ್ತಪಡಿಸಿದ್ದಾರೆ. ಜರ್ಸಿ ಹಸುಗಳಿಗಿಂತ ಕಡಿಮೆ ಹಾಲು ನೀಡಿದರೂ ಔಷಧೀಯ, ಪೌಷ್ಟಿಕಾಂಶಯುಕ್ತ ಹಾಲನ್ನು ದೇಸಿ ತಳಿಯ ಹಸುಗಳು ನೀಡುತ್ತವೆ ಎನ್ನುವುದು ಗೋ ಪ್ರೇಮಿಗಳ ಅಭಿಪ್ರಾಯ.

ಕರಾವಳಿ, ಮಲೆನಾಡ ಭಾಗದಲ್ಲಿ ಕಾಣುವ ಮಲೆನಾಡ ಗಿಡ ಗಾತ್ರದಲ್ಲಿ ಕಿರಿದಾಗಿರುತ್ತವೆ.ಆದರೆ, ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. ಈ ತಳಿಯ ಗೋವುಗಳು ಕಡಿಮೆ ಆಹಾರ ತಿಂದು, ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಾಗೂ ಪೌಷ್ಟಿಕಾಂಶಯುಕ್ತ ಹಾಲು ನೀಡುತ್ತವೆ. ದಿನದಲ್ಲಿ ಹೆಚ್ಚಿನ ಕಾಲ ಗುಡ್ಡ, ಕಾಡುಗಳಲ್ಲಿ ಅಡ್ಡಾಡುತ್ತಾ ಎಲೆ, ಹುಲ್ಲು, ಚಿಗುರುಗಳನ್ನು ತಿನ್ನುತ್ತಿರುತ್ತವೆ. ಈ ಹಸು ತಿನ್ನುವ ಅನೇಕ ಗಿಡಮರ, ಬಳ್ಳಿಗಳು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿವೆಯೆಂದು ಅನೇಕ ಆಯುರ್ವೇದೀಯ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಾಗಿ ಈ ಗೋವುಗಳ ಹಾಲು, ಮೂತ್ರ ಎಲ್ಲವೂ ಔಷಧೀಯವಾಗಿ ಅತಿ ಶ್ರೇಷ್ಠವಾಗಿರುತ್ತದೆ.

ಶಾಲಿನಿ ರಜನೀಶ್ ಅಧೀನ ಕಾರ್ಯದರ್ಶಿಯಾಗಿದ್ದಾಗ ಒಂದು ಗೋವು ಬೇಕೆಂದು ಕೇಳಿದ್ದರು. ಆದರೆ ಫಾರ್ಮ್ ನಿಂದ ನೀಡಲು ಅವಕಾಶ ಇಲ್ಲದೇ ಇರುವುದರಿಂದ ನಮ್ಮ ಮನೆಯ ಗೋವನ್ನು ಕೇಳಿದರು. ಮಲೆನಾಡ ಗಿಡ್ಡ ಅಳಿವಿನಂಚಿನಲ್ಲಿರುವುದರಿಂದ ಅದನ್ನೇ ಶಾಲಿನಿ ಅವರ ನಿವಾಸಕ್ಕೆ ಕಳುಹಿಸಲು ತೀರ್ಮಾನಿಸಿದೆ. ಖುಷಿಯಿಂದ ಕಳುಹಿಸಿ ಕೊಟ್ಟಿದ್ದೇವೆ ಎಂದು ಆಳ್ವಾರ ಫಾರ್ಮ್ ಮುಖ್ಯಸ್ಥ ಅಕ್ಷಯ ಆಳ್ವ ತಿಳಿಸಿದರು.