ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಹಾಸ್‌ ಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯ ಬಳಿ ಮೇ 1ರಂದು ರಾತ್ರಿ ಶರಣ್ ಪಂಪ್‌ವೆಲ್, ‘ಸುಹಾಸ್‌ ಶೆಟ್ಟಿ ಹಿಂದೂ ಸಂಘಟನೆಯ ಕಾರ್ಯಕರ್ತ. ಆತ ಇಸ್ಲಾಮಿನ ಜಿಹಾದಿ ಉಗ್ರಗಾಮಿಳಿಂದ ಕೊಲೆಯಾಗಿದ್ದಾನೆ. ನಿಷೇಧಿತ ಪಿಎಫ್‌ಐ ಸಂಘಟನೆ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳು ಜಿಲ್ಲೆಯಾದ್ಯಂತ ಬಂದ್‌ ನಡೆಸಲಿವೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಂಗಡಿ ಮಳಿಗೆಗಳನ್ನು ಮುಚ್ಚುವಂತೆ ಸೂಚಿಸಿದ್ದರು ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

 

ಕದ್ರಿ ಪೊಲೀಸರಿಂದ ಬಂಧನವಾಗಿದ್ದ ಶರಣ್‌ ಪಂಪ್‌ವೆಲ್‌ಗೆ ಜಾಮೀನು ಮಂಜೂರು

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯಾದ ಸಂದರ್ಭ ಬಂದ್‌ಗೆ ಕರೆ ನೀಡಿದ್ದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಾಯಕ ಶರಣ್‌ ಪಂಪ್‌ವೆಲ್‌ ಅವರನ್ನು ಮಂಗಳವಾರ ರಾತ್ರಿ ಕದ್ರಿ ಪೊಲೀಸರು ಬಂಧಿಸಿ, ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ ವೇಳೆ ಜಾಮೀನು ಮಂಜೂರು ಮಾಡಿದ್ದಾರೆ.

ಮಂಗಳವಾರ ರಾತ್ರಿ ನಗರದ ಬೋಂದೆಲ್‌ನಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಶರಣ್‌ ಪಂಪ್‌ವೆಲ್‌ ರನ್ನು ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ವಿಚಾರಣೆಯನ್ನು ಬುಧವಾರಕ್ಕೆ (ಮೇ 28) ಮುಂದೂಡಿದರು.

ಶರಣ್‌ ಪಂಪ್‌ವೆಲ್‌ ಬಂಧನಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ
ಒಂದು ಸಮುದಾಯದ ಓಲೈಕೆಗೆ ಸರಕಾರ ಮುಂದಾಗಿ ಶರಣ್‌ ಪಂಪ್‌ವೆಲ್‌ ಅವರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ 20 ದಿನಗಳ ಬಳಿಕ ಬಂಧನ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಿದ್ದ ಶರಣ್‌ ಪಂಪ್‌ವೆಲ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಎರಡು ನೋಟಿಸ್‌ಗಳನ್ನು ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲವಾದ್ದರಿಂದ ಶರಣ್‌ ಪಂಪ್‌ವೆಲ್‌ ಬಂಧಿಸಿ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು.

ಶರಣ್‌ ಪಂಪ್‌ವೆಲ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಕದ್ರಿ ಠಾಣೆ ಎದುರು ಜಮಾಯಿಸಿದರು. ಆದರೆ ಸೆಕ್ಷನ್‌ ಜಾರಿಯಲ್ಲಿರುವುದರಿಂದ ಹೆಚ್ಚು ಜನ ಸೇರದಂತೆ ತಿಳಿಸಿ ಅಲ್ಲಿದ್ದವರನ್ನು ಪೊಲೀಸರು ಚದುರಿಸಿದರು. ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು.