ಬೆಳಗಾವಿ : ಮಾಜಿ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಜಲ ಶಕ್ತಿ ಸಚಿವ ಸಿ. ಆರ್ .ಪಾಟೀಲ ಅವರನ್ನು ಭೇಟಿ ಮಾಡಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ – ಎಸ್ ಎಮ್ ಐ ಮತ್ತು ಆರ್ ಆರ್ ಆರ್ ಯೋಜನೆಯಡಿ, ಬೆಳಗಾವಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳ ಕುರಿತು ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಕಳುಹಿಸಲಾದ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ವಿನಂತಿ ಪತ್ರ ನೀಡಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ – ಎಸ್ ಎಮ್ ಐ ಮತ್ತು ಆರ್ ಆರ್ ಆರ್ ಯೋಜನೆಯಡಿ, ಬೆಳಗಾವಿ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು ರೂ.521.80 ಕೋಟಿ ಅನುದಾನದ ಒಟ್ಟು 143 ಕಾಮಗಾರಿಗಳನ್ನು ಒಳಗೊಂಡ ಮೂರು ಪ್ರಸ್ತಾವನೆಗಳು ರಾಜ್ಯ ಸರ್ಕಾರದಿಂದ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಲ್ಲಿ ಭೂಮಿಯಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ನೀರಿನ ಅಂಶ, ಈ ಯೋಜನೆಯ ಅನುಷ್ಠಾನದಿಂದ ಹೆಚ್ಚಾಗಿ ರೈತರಿಗೆ ಇದು ತುಂಬಾ ಅನುಕೂಲವಾಗಲಿದೆ ಎಂದು ಸಂಸದರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿದರು.
ವಿಷಯವನ್ನು ಸಹಾನುಭೂತಿಯಿಂದ ಆಲಿಸಿದ ಕೇಂದ್ರ ಜಲ ಶಕ್ತಿ ಸಚಿವರು ಈ ಬಗ್ಗೆ ಬಂದಿರುವ ಪ್ರಸ್ತಾವನೆಗಳನ್ನು ಅವಲೋಕಿಸಿ ಅವುಗಳಿಗೆ ಶೀಘ್ರ ಅನುಮೋದನೆ ನೀಡುವುದಾಗಿ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ ನೀಡಿದ ತೀರ್ಪಿನಂತೆ ಕಳಸಾ – ಬಂಡೂರಿ ಕುಡಿಯುವ ನೀರಿನ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ರೈತರು ನಡೆಸುತ್ತಿರುವ ಧರಣಿಯ ಬಗ್ಗೆಯೂ ಸಹ ಕೇಂದ್ರ ಜಲ ಶಕ್ತಿ ಸಚಿವರ ಗಮನವನ್ನು ಸೆಳೆದು ಇದರ ಶೀಘ್ರ ಅನುಷ್ಠಾನಕ್ಕೆ ಜಗದೀಶ ಶೆಟ್ಟರ ಅವರು ಅವರಲ್ಲಿ ವಿನಂತಿಸಿದ್ದು ಗಮನಾರ್ಹ.