ಶಿರಸಿ: ದಕ್ಷಿಣ ಭಾರತದಲ್ಲಿ ಅತ್ಯಂತ ದೊಡ್ಡ ಹಾಗೂ ಅದ್ದೂರಿಯಾಗಿ ನಡೆದ 9 ದಿನಗಳ ಮಾರಿಕಾಂಬಾ ಜಾತ್ರೆಯಲ್ಲಿ ದೇವಸ್ಥಾನಕ್ಕೆ 1.75 ಕೋಟಿ ರು.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಮಾ.20ರಿಂದ ದೇವಿ ದರ್ಶನ ಆರಂಭಗೊಂಡು 27ರ ಬೆಳಗ್ಗೆ 10.30ರ ಅವಧಿವರೆಗೆ ಸಂಗ್ರಹವಾಗಿರುವ ಮೊತ್ತ ಇದಾಗಿದೆ.

ಬೆಳ್ಳಿಯ ತೊಟ್ಟಿಲು, ಕಣ್ಣುಗಳು, ಮೂಗುಬೊಟ್ಟು, ಬಂಗಾರದ ತಾಳಿಗಳು ಕಾಣಿಕೆ ಹುಂಡಿಯಲ್ಲಿ ಸಿಕ್ಕಿವೆ. ಸಂತಾನ ಭಾಗ್ಯ ಹರಕೆ ಫಲಿಸಿದ ಕಾರಣ ಬೆಳ್ಳಿಯ ತೊಟ್ಟಿಲುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. 2.60 ಲಕ್ಷ ಲಡ್ಡುಗಳು ಖಾಲಿಯಾಗಿವೆ. 1 ಲಕ್ಷ ಭಕ್ತರಿಗೆ ಮಾರಿಗುಡಿ ಶಾಲೆ ಬಳಿ ಉಚಿತ ಅನ್ನ ಪ್ರಸಾದ ವಿತರಿಸಲಾಗಿದೆ. ತಲಾ 2 ಲಕ್ಷಕ್ಕೂ ಹೆಚ್ಚಿನ ಉಡಿ, ಕುಂಕುಮ ಪ್ರಸಾದಗಳು ಮಾರಾಟವಾಗಿವೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ ಮಾಹಿತಿ ನೀಡಿದ್ದಾರೆ.