ಮುಂಬೈ: ಸದ್ಯಕ್ಕೆ ಮಹಾರಾಷ್ಟ್ರಕ್ಕೆ ಏಕನಾಥ್ ಶಿಂಧೆಯೇ ಮುಖ್ಯಮಂತ್ರಿ. ಸೋಮವಾರವೇ (ನ. 25) ಪ್ರಮಾಣ ವಚನ ಸ್ವೀಕಾರ… ಹೀಗೆಂದು ಹೇಳಿದ್ದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಯವರ ಬಣದಲ್ಲಿ ಗುರುತಿಸಿಕೊಂಡಿರುವ ದೀಪಕ್ ಕೇಸರ್ಕರ್. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ – ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ – ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಬಣಗಳ ‘ಮಹಾಯುತಿ’ ಮೈತ್ರಿಕೂಟ ಬಂಪರ್ ಬಹುಮತ ಪಡೆದಿವೆ.

ಅದರೊಂದಿಗೆ ಸರ್ಕಾರ ರಚನೆಗೆ ಕಸರತ್ತು ಜೋರಾಗಿದೆ. ಇದರ ನಡುವೆಯೇ, ಏಕನಾಥ್ ಶಿಂಧೆಯವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ದೀಪಕ್ ಕೇಸರ್ಕರ್ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಎಂ ಜೊತೆಗೆ ಇಬ್ಬರು ಡಿಸಿಎಂಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಇದು ಎಷ್ಟರಮಟ್ಟಿಗೆ ನಿಜ ಕಾದು ನೋಡಬೇಕು. ಯಾಕೆಂದರೆ ಇಡೀ ಮಹಾರಾಷ್ಟ್ರದಲ್ಲಿ ಇದೀಗ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತೊಂದು ಸಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿದೆ. ಬಿಜೆಪಿ ಒಂದೇ 132 ಸ್ಥಾನ ಪಡೆದುಕೊಂಡಿದೆ.