ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಪ್ರಕರಣ ಸಂಬಂಧ, ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ಅವರನ್ನು ಕೊಲ್ಲಾಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಟೀಲ್ ಅವರನ್ನು ಗುರುವಾರ ತಡರಾತ್ರಿ ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಸಿಂಧುದುರ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ.
ಶಿವಾಜಿ ಪ್ರತಿಮೆ ಕುಸಿದುಬಿದ್ದ ಘಟನೆ ಸಂಬಂಧ, ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರನ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರತಿಮೆ ನಿರ್ಮಾಣದ ಗುತ್ತಿಗೆದಾರ, ವಿನ್ಯಾಸಕ ಹಾಗೂ ಕಲಾವಿದರೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಒಬ್ಬರು ಮಾಲ್ವನ್ ಠಾಣೆಗೆ ಈ ಸಂಬಂಧ ಸೋಮವಾರ ದೂರು ನೀಡಿದ್ದರು. ದೂರನ್ನು ಆಧರಿಸಿ ಗುತ್ತಿಗೆದಾರ ಜಯದೀಪ್ ಆಷ್ಟೆ ಹಾಗೂ ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಒಳಸಂಚು, ವಂಚನೆ, ಸಾರ್ವಜನಿಕ ಸುರಕ್ಷತೆಗೆ ಅಪಾಯವಿದೆ ಎಂಬ ಆರೋಪಗಳ ಜತೆಗೆ ಪ್ರತಿಮೆಯ ನಿರ್ಮಾಣ ಕಳಪೆ ಗುಣಮಟ್ಟದ್ದಾಗಿದ್ದು, ಅದರಲ್ಲಿ ಬಳಸಲಾದ ನಟ್ ಬೋಲ್ಟ್ಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನೀಡಿದ ದೂರಿನ ಮೇರೆಗೆ ಈ ಎಫ್‌ಐಆರ್ ದಾಖಲಿಸಲಾಗಿತ್ತು.
ಬಂಧಿತನಾಗಿರುವ ಆರೋಪಿ ಚೇತನ್ ಮೂಲತಃ ಕೊಲ್ಲಾಪುರದ ನಿವಾಸಿ ಎಂದು ಹೇಳಲಾಗಿದೆ. ಎಫ್‌ಐಆರ್ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದ ಕೊಲ್ಲಾಪುರ ಅಪರಾಧ ದಳ ಮತ್ತು ಮಾಳವನ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಇಂದು ಮುಂಜಾನೆ ಚೇತನ್‌ನನ್ನು ಅರೆಸ್ಟ್ ಮಾಡಿದ್ದಾರೆ.