ಬೆಂಗಳೂರು :
ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಹೋಗದೆ ಇರುವ ವಿಷಯವನ್ನು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕೊನೆಗೂ ಬಹಿರಂಗಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸ್ಥಿತಿ ಸ್ಥಿರವಾಗಲು ತಡವಾಯಿತು. ಆದ್ದರಿಂದ ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮಂಗಳವಾರ ಬೆಳಗ್ಗೆ ನನ್ನ ಆರೋಗ್ಯ ಸರಿ ಇರಲಿಲ್ಲ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೆ. ಮಧ್ಯಾಹ್ನದ ವೇಳೆಗೆ ಬಿಡುಗಡೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಆದರೆ ಆರೋಗ್ಯ ಸ್ಥಿರವಾಗಲು ತಡವಾಯಿತು. ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದು ಅವರು ತಿಳಿಸಿದರು.

ನನಗೆ ಅಸಮಾಧಾನ ಇದ್ದಿದ್ದರೆ ಅಡ್ಡ ಮತದಾನ ಮಾಡುವ ಅವಕಾಶ ಇತ್ತು. ಆದರೆ ನಾನು ಹಾಗೆ ಮಾಡಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನನಗೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಮುಖಂಡರ ಮೇಲೆ ಯಾವ ಅಸಮಾಧಾನ ಇಲ್ಲ. ಆದರೆ ಸಮಸ್ಯೆ ಇರುವುದು ಜಿಲ್ಲಾಮಟ್ಟದ ನಾಯಕರಿಂದ ಮಾತ್ರ. ಯಾರು ನನಗೆ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಲಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವಿರೋಧಿ ಕೆಲಸ ಮಾಡಿದವರ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗದ ಪಕ್ಷದ ಕೆಲ ಮುಖಂಡರ ಮೇಲೆ ಬೇಸರ ಇದೆ. ಜೊತೆಗೆ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿಯೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಾಲ್ಕು ದಶಕಗಳಿಂದ ರಾಜಕಾರಣದಲ್ಲಿ ಇದ್ದೇನೆ. ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ. ನಾನು ಅಡ್ಡ ಮತದಾನ ಮಾಡಬಹುದಿತ್ತು, ಇಲ್ಲವೇ ಮತದಾನ ಮಾಡದೆಯೂ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ಅಸಮಾಧಾನ ಇರುವುದು ನಿಜವಾಗಿದ್ದರೂ ಅದು ಕೇವಲ ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತ ಎಂದು ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.