ಬೆಳಗಾವಿ : ನಾನು ಮಾಡಿರುವ ಅಕ್ರಮ ಇದ್ದರೆ ದಾಖಲೆ ಸಹಿತ ಬಿಡುಗಡೆಗೊಳಿಸಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯದ ಸಚಿವ ಬೈರತಿ ಸುರೇಶ ಅವರಿಗೆ ಸವಾಲು ಹಾಕಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವ ಸುರೇಶ ಅವರು ಮುಡಾ ಹಗರಣ ಸಂಬಂಧ ಸಾವಿರಾರು ಕಡತ ತಂದು ಸುಟ್ಟು ಹಾಕಿದ್ದಾರೆ. ಆ ಬಗ್ಗೆ ನಾನು ಧ್ವನಿಯೆತ್ತಿದ್ದಕ್ಕೆ ನನ್ನ ಬಗ್ಗೆ ಬೇರೆಯೇ ಆದ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ನನ್ನ ಬಗ್ಗೆ ಹಲವರು ಆರೋಪ ಮಾಡಿ ತನಿಖೆ ಮಾಡಿದರು. ಆದರೆ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಅವರು ವಾಗ್ದಾನ ಮಾಡಿದರು.

ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ನಕಲಿ ಕಡತ ಸೃಷ್ಟಿಸಲು ಪೊನ್ನಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಇಲ್ಲಿ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮಲ್ಲಿರುವ ದಾಖಲೆ ಇದ್ದರೆ ತಕ್ಷಣ ಹೊರಗೆ ಹಾಕಿ. ಬೈರತಿ ಸುರೇಶ ಅವರಿಗೆ ಈಗ ಮುಡಾ ಸಂಕಟ ಶುರುವಾಗಿದೆ. ಅವರು ಮೈಸೂರಿನಿಂದ ಕಡತ ತಂದು ಸುಟ್ಟು ಹಾಕಿರುವುದು ಸತ್ಯ. ಮುಡಾ ಹಗರಣದ ಭಯ ಅವರಿಗೆ ಆವರಿಸಿದ್ದು ತನಿಖೆ ಆರಂಭವಾಗಿದೆ. ಹೀಗಾಗಿ ನನ್ನ ಮೇಲೆ ಆ ಭಯದಿಂದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಭೈರತಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತೆ ಜಯಗಳಿಸಲಿದೆ. ಉಪಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲೂ ಎನ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ನಮ್ಮ ಶಕ್ತಿ ಇರುವುದು ಬೂತ್ ಮಟ್ಟದಲ್ಲಿ. ಹೀಗಾಗಿ ನಮಗೆ ಉತ್ತಮ ವಾತಾವರಣವಿದೆ. ಮೂರು ಕ್ಷೇತ್ರಗಳಲ್ಲೂ ನಾವೇ ಗೆದ್ದೇ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.