ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಷಯ ಇದು. ಕಸಾಪ ರಾಜ್ಯ ಅಧ್ಯಕ್ಷರೇ ಈ ವಿಷಯ ಹರಿಬಿಟ್ಟಂತಿದೆ.

ಸಾಹಿತ್ಯ ಪರಿಷತ್ತಿಗೆ ೬೦ ವರ್ಷಗಳಿಂದ ಆಜೀವ ಸದಸ್ಯನಾಗಿರುವ ನನಗೂ ನನ್ನ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ ಎಂದು ನಾನು ನಂಬಿದ್ದೇನೆ. ಅಲ್ಲದೆ ಕಸಾಪ ಜತೆ ಹಲವು ಬಗೆಯ ಸಂಬಂಧ, ಸಂಪರ್ಕ ಹೊಂದಿದ್ದೇನೆ. ಈಚಿನ ಒಂದೆರಡು ದಶಕಗಳಲ್ಲಿ ಕಸಾಪದಲ್ಲಿ ಗುಂಪುಗಾರಿಕೆ, ಜಾತೀಯತೆ, ಸ್ವಜನ ಪಕ್ಷಪಾತ, ಅಧಿಕಾರಮದ ಮೊದಲಾದವುಗಳೆಲ್ಲ ಪ್ರವೇಶವಾಗಿ ನಮ್ಮಂಥವರನ್ನೆಲ್ಲ ದೂರವಿಡುವ ಪ್ರಯತ್ನವೂ ನಡೆದಿದೆ. ಆದರೆ ಕಸಾಪ ಕೇವಲ ಅಲ್ಲಿ ಅಧಿಕಾರದಲ್ಲಿದ್ದವರದಲ್ಲ. ಅದರ ಮೇಲೆ ನಮ್ಮ ಹಕ್ಕೂ‌ ಇದ್ದೇಇದೆ.
ಇನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ಕ್ಷೇತ್ರಗಳ ಸಾಧಕರನ್ನು ಅಧ್ಯಕ್ಷರನ್ನಾಗಿ ಮಾಡುವುದು ಸರಿಯೋ‌ ತಪ್ಪೋ ? ಇದು ಈಗ ಯೋಚಿಸಬೇಕಾದ ವಿಷಯ.
‌ ಪ್ರಶ್ನೆ ೧- ಪರಿಷತ್ತಿಗೆ ೧೦೮ ವರ್ಷಗಳ ಇತಿಹಾಸ ಇದೆ. ೮೬ ಸಮ್ಮೇಳನಗಳು ನಡೆದಿವೆ. ಈವರೆಗೆ ಸಾಹಿತಿಗಳಲ್ಲದವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದಾರೆಯೇ? ಸಾಹಿತಿಗಳನ್ನೇ ಮಾಡುತ್ತ ಬಂದಿದ್ದಾರೆ. ಈಗ ಯಾಕೆ ಆ ಪರಂಪರೆಯನ್ನು ಮುರಿಯಬೇಕು? ಅದರ ಅಗತ್ಯವೇನಿದೆ?
ಪ್ರಶ್ನೆ ೨- ಕಸಾಪ ಕಾರ್ಯಕಾರಿ ಸಮಿತಿಯವರು ಮೊದಲು ನಿರ್ಧರಿಸಿಕೊಳ್ಳಬೇಕಾದ್ದು ತಾವು ಮಾಡುತ್ತಿರುವುದು ಸಾಹಿತ್ಯ ಸಮ್ಮೇಳನವೋ , ಅಥವಾ ಸಾಹಿತ್ಯೇತರ ಸಮ್ಮೇಳನವೋ ಎಂಬುದನ್ನು. ಸಾಹಿತ್ಯ ಸಮ್ಮೇಳನವನ್ನೇ ಮಾಡುತ್ತೇವೆ ಎನ್ನುವುದಾದರೆ ಅದಕ್ಕೆ ಸಾಹಿತಿಗಳನ್ನೇ ಆಯ್ಕೆ ಮಾಡಬೇಕು.
ಪ್ರಶ್ನೆ ೩- ನಾಡಿನಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ವಿಜ್ಞಾನ, ಧರ್ಮ, ಶಿಕ್ಷಣ , ಮತ್ತಿತರ ಹಲವು ಕ್ಷೇತ್ರಗಳಿದ್ದು ಅವಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಸಮ್ಮೇಳನಗಳು ನಡೆಯುತ್ತಿವೆ. ಅವುಗಳಿಗೆ ಆ ಆ ಕ್ಷೇತ್ರಗಳ ಸಾಧಕರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಅಂದಾಗ ಸಾಹಿತ್ಯ ಕ್ಷೇತ್ರದ ಸಮ್ಮೇಳನಕ್ಕೆ ಇತರ ಕ್ಷೇತ್ರಗಳ ಸಾಧಕರನ್ನು ಯಾಕೆ ಆಯ್ಕೆ ಮಾಡಬೇಕು? ಒಂದು ವೇಳೆ ಅವರು ಶ್ರೇಷ್ಠ ಸಾಹಿತಿಯಾಗಿದ್ದು ಇತರ ಕ್ಷೇತ್ರಗಳಲ್ಲೂ ಸಾಧನೆ ಗೈದವರಾಗಿದ್ದರೆ ಆಗ ಅಂಥವರನ್ನು ಆಯ್ಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರಥಮ ಆದ್ಯತೆ ಸಾಹಿತಿಗಳಿಗೇ ಇರಬೇಕು.
ಪ್ರಶ್ನೆ ೫- ಸಾಹಿತ್ಯ ಸಮ್ಮೇಳನವೆನ್ನುವುದು ಪೂರ್ತಿ ಸಾಹಿತ್ಯಕ್ಕೆ ಮೀಸಲಾಗಿರಬೇಕಲ್ಲವೆ? ಇಲ್ಲವಾದರೆ ನೀವು ಸಾಹಿತ್ಯ ಎಂಬ ಶಬ್ದವನ್ನು ತೆಗೆದು ಬೇರೆ ಶಬ್ದ ಬಳಸುವುದು ಉತ್ತಮ. ಸಮ್ಮೇಳನದಲ್ಲಿ ಭಾಷೆ ನಾಡುನುಡಿ ನೆಲಜಲ ಮತ್ತಿತರ ವಿಷಯವಾಗಿ ಗೋಷ್ಠಿಗಳನ್ನು ನಡೆಸುವುದಕ್ಕೆ ಅವಕಾಶ ಇದ್ದೇಇದೆಯಲ್ಲ. ಅದರಲ್ಲಿ ತಪ್ಪೇನಿಲ್ಲ.
ಪ್ರಶ್ನೆ ೬- ಸಾಹಿತ್ಯ ಸಮ್ಮೇಳನವೆನ್ನುವುದು ಈಚಿನ ಕೆಲ ವರ್ಷಗಳಲ್ಲಿ ಒಂದು ಮೋಜಿನ ಜಾತ್ರೆ ಆಗಿದೆ ಎನ್ನುವ ಆರೋಪ ಇದ್ದೇಇದೆ. ಸಾಹಿತ್ಯಕ್ಕಿಂತ ಅಲ್ಲಿ ಇತರ ಸಂಗತಿಗಳಿಗೇ ಹೆಚ್ಚಿನ ಮಹತ್ವ ಸಿಗುತ್ತಿರುವುದೂ ಸುಳ್ಳಲ್ಲ. ಭರ್ಜರಿ ಊಟ, ಭವ್ಯ ಪೆಂಡಾಲು, ವಿಶಾಲ ವೇದಿಕೆ, ಸುತ್ತಮುತ್ತ ವಿವಿಧ ಮಾರಾಟ ಮಳಿಗೆಗಳ ವ್ಯಾಪಾರ, , ಮೂರುದಿನ ಓಓಡಿ ಪಡೆದು ಸಕುಟುಂಬ ಪ್ರವಾಸದ ಮಜಾ ಅನುಭವಿಸುವವರ ಸಂಭ್ರಮ ಇತ್ಯಾದಿ ಸಾಹಿತ್ಯೇತರ ಅಂಶಗಳೇ ಮಹತ್ವ ಪಡೆಯುತ್ತಿದ್ದು , ವಿಚಾರಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಅಧ್ಯಯನವಿಲ್ಲದ ಎಳಸು ಸಾಹಿತಿಗಳು ವಶೀಲಿ ಮೇಲೆ ಹೆಸರು ಹಾಕಿಸಿಕೊಳ್ಳುವುದು, ಗುಣಮಟ್ಟವಿಲ್ಲದ ಪ್ರಬಂಧಗಳ ಮಂಡನೆ ಮಾಡುವುದು, ಇಡೀ ಕವಿ ಗೋಷ್ಠಿಯಲ್ಲಿ ಒಂದೆರಡು ಉತ್ತಮ ಕವನಗಳೂ ಸಿಗದಿರುವುದು ಇವೆಲ್ಲ ಮಾಮೂಲು. ಇದರಿಂದಾಗಿ ನಿಜವಾದ ಸಾಹಿತ್ಯಾಸಕ್ತರು ಸಮ್ಮೇಳನಗಳಿಗೆ ಹೋಗುವ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ.

ನಾನೇನು ಇದನ್ನು ಟೀಕೆಯ ದೃಷ್ಟಿಯಿಂದ ಹೇಳುತ್ತಿಲ್ಲ. ವ್ಯವಸ್ಥೆಯ ಸುಧಾರಣೆ ಸಾಧ್ಯವಾದರೆ ಮಾಡಲಿ ಎನ್ನುವ ಸದುದ್ದೇಶದಿಂದ ಹೇಳುತ್ತಿದ್ದೇನೆ. ನನ್ನ ಈ ವಿಚಾರಗಳನ್ನು ಒಪ್ಪಿ ಬೆಂಬಲಿಸುವವರೂ ಸಾಕಷ್ಟು ಜನರಿದ್ದಾರೆನ್ನುವುದನ್ನು ನಾನು ಬಲ್ಲೆ. ಕೆಲವರು ಬಹಿರಂಗವಾಗಿ ಹೇಳಲು ಹಿಂಜರಿಯುತ್ತಾರೆ.

ಸಾಹಿತ್ಯ ಪರಿಷತ್ತು ಮಾಡುವುದು ಸಾಹಿತ್ಯ ಸಮ್ಮೇಳನ. ಸಾಹಿತಿಗಳೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಾದ್ದು ಸರಿ. ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಇತರ ಸಾಧಕರಿಗೆ ಅವಕಾಶ ನೀಡಬಹುದಾಗಿದೆ. ಒಂದು ಮಾತು ಮಾತ್ರ ನಿಜಾ. ನಮ್ಮಂಥವರ ಹಿತವಚನಗಳನ್ನು ಕೇಳುವವರು ಈಗ ಯಾರೂ ಇಲ್ಲ. ಅವರವರ ವೈಯಕ್ತಿಕ ಒಣ ಪ್ರತಿಷ್ಠೆ ಮುಖ್ಯವಾಗಿದೆ. ಆದ್ದರಿಂದ ನಮ್ಮ ಮನಸ್ಸಿನ ತೃಪ್ತಿಗೆ ನಮ್ಮ ವಿಚಾರ ಬರೆಯುವುದು ಅಷ್ಟೇ.

✒️ಎಲ್. ಎಸ್. ಶಾಸ್ತ್ರಿ