ವಿಜಯಪುರ: ಅಯೋಧ್ಯೆಯ ಶ್ರೀ ರಾಮ ಮಂದಿರ ಚಾವಣಿ ನಿರ್ಮಾಣ ಇನ್ನೂ ಪೂರ್ಣವಾಗಿರದ ಕಾರಣಕ್ಕೆ ಮಳೆ ಬಂದಾಗ ಸೋರಿಕೆಯಾಗುತ್ತದೆಯೇ ಹೊರತು ರಾಮಮಂದಿರ ಕಾಮಗಾರಿಯಲ್ಲಿ ಯಾವುದೇ ಕುಂದುಕೊರತೆಯಾಗಿಲ್ಲ. ಇನ್ನೊಂದು ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಡತನ ಹೆಚ್ಚಿರುವುದರಿಂದ ಮತದಾರರು ಆಸೆ-ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಿದ್ದಾರೆ. ಇದು ಹಿಂದುಗಳ ಧಾರ್ಮಿಕ ನಂಬಿಕೆಗೆ ಹೊಡೆತ ಎಂದು ಭಾವಿಸಬಾರದು. ಪ್ರತಿಪಕ್ಷಗಳ ಮೋಸ, ಆಸೆ- ಆಮಿಷದಿಂದ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲಾಗಿದೆಯೇ ಹೊರತು ಇದನ್ನು ಹಿಂದುಗಳಿಗೆ ಹಿನ್ನಡೆ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚಿಗೆ ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ದ್ವೇಷದಲ್ಲಿ ಹಗಲಿರಳು ನಿರತವಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಸಹಿಷ್ಣುಗಳಾದ ಹಿಂದುಗಳನ್ನು ಕೆಣಕಬೇಕು, ಒಂದಿಷ್ಟು ಗೊಂದಲ ಸೃಷ್ಟಿಸಬೇಕು, ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇಂಥ ಹೇಳಿಕೆ ನೀಡಿದ್ದಾರೆ. ರಾಜಕೀಯ ನಾಯಕರು ಇಂತಹ ಬೇಜವ್ದಾರಿಯುತ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.