
ಹೊನ್ನಾವರ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ 90 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಫೆಬ್ರವರಿ 22ರಿಂದ ಮಾರ್ಚ್ 2ರವರೆಗೆ 9 ದಿನಗಳ ಕಾಲ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಕರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಹೊನ್ನಾವರ ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪ್ರದಾನ ಫೆಬ್ರವರಿ 22ರಂದು ಉದ್ಘಾಟನಾ ಸಮಾರಂಭದಲ್ಲಿ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತಿಗೆ ಪ್ರದಾನ ಮಾಡಲಾಗುತ್ತದೆ. ಫೆಬ್ರವರಿ 23ರಂದು ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.
ಮಂಡಳಿ 90 ವರ್ಷ ತುಂಬಿದ ಹಿನ್ನೆಯಲ್ಲಿ ಮಂಡಳಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಎಲ್ಲ ಹಿರಿಯ ಹಾಗೂ ಹೊಸ ಕಲಾವಿದರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಪ್ರತಿದಿನ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ, ಪ್ರಶಸ್ತಿ ಪ್ರದಾನ ನಡೆಯಲಿದ್ದು, ವಿವಿಧ ರಾಜ್ಯಗಳ ಕಲಾವಿದರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಈ ವರ್ಷ ವಿಶೇಷವಾಗಿ ದಿ. ಹೊಸ್ತೋಟ ಮಂಜುನಾಥ ಭಾಗವತರ ಕುರಿತು ವಿಚಾರಗೋಷ್ಠಿ, ಎರಡು ದಿನ ತಾಳಮದ್ದಳೆ, ಕೊನೆಯ ದಿನ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಭರತ ನಾಟ್ಯ, ಕಥಕ್ಕಳಿ, ಗಮಕವಾಚನ, ವಯಲಿನ್ ಜುಗಲ್‌ಬಂಧಿ, ನಾಟಕ, ಮೂಕಾಭಿನಯ, ಕೊಳಲುವಾದನ, ಗೀತ ರಾಮಾಯಣ, ಹಿಂದೂಸ್ಥಾನಿ ಸಂಗೀತ, ಅಹೋರಾತ್ರಿ ಯಕ್ಷಗಾನ ಮುಂತಾದವು ಪ್ರದರ್ಶನಗೊಳ್ಳಲಿವೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ 100ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರು ಕಲಾಪ್ರದರ್ಶನದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕೆರೆಮನೆ ಶ್ರೀಧರ ಹೆಗಡೆ, ಕೆ.ಜಿ.ಹೆಗಡ ಅಪ್ಸರಕೊಂಡ, ನರಸಿಂಹ ಹೆಗಡೆ ಕೆರೆಮನೆ, ಮಹೇಶ ಹೆಗಡೆ ಮಾಳ್ಕೋಡ ಉಪಸ್ಥಿತರಿದ್ದರು.