Join The Telegram | Join The WhatsApp |
ಕಾರ್ಕಳ: ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ಅವರಿಗೆ ಹಿರ್ಗಾನ ಕುಂದೇಶ್ವರ ಕ್ಷೇತ್ರದಿಂದ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಕರಾವಳಿಯ ಸಂಸ್ಕೃತಿಯು ಜಗದ್ವಿಖ್ಯಾತವಾಗುತ್ತಿದೆ. ದೈವ, ಆಧ್ಯಾತ್ಮ, ಭಜನೆ. ಪೂಜೆ ಪುನಸ್ಕಾರಗಳಿಂದಾಗಿ ಕರಾವಳಿ ನಿಜವಾಗಿಯೂ ದೇವರನಾಡು. ಕರಾವಳಿಯಲ್ಲಿ ಭಜನೆ ಮೂಲಕ ಆಧ್ಯಾತ್ಮಿಕ ವಿಚಾರಧಾರೆ ಪಸರಿಸುತ್ತಿವೆ. ಒಂದಿಲ್ಲ ಒಂದು ಕಾರ್ಯಕ್ರಮಗಳಿಂದ ವರ್ಷವಿಡೀ ಹಬ್ಬದಂತೆ ಆಚರಿಸುವ ಪುಣ್ಯ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದೆ ಕುಂದೇಶ್ವರ ದರ್ಶನದಿಂದ ಪುನೀತನಾದೆ ಎಂದರು.
ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿಮಾತನಾಡಿ, ಹಿಂದೆಲ್ಲ ಯಕ್ಷಗಾನದ ಮೂಲಕ ಪುರಾಣ, ಮಹಾಗ್ರಂಥಗಳ ಸಾರವನ್ನು ತಿಳಿದುಕೊಳ್ಳುತ್ತಿದ್ದೆವು. ದೇಶದ ಜನರನ್ನು ಸೆಳೆಯುತ್ತಿರುವ ತುಳುನಾಡು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹಿಂದುಗಳ ಪುಣ್ಯಭೂಮಿ ಆಗಿದೆ ಎಂದರು.
ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿ, ಯಕ್ಷಗಾನ, ನಾಟಕ, ಸಿನಿಮಾ ಕ್ಷೇತ್ರದಲ್ಲಿ ರಚನೆಕಾರ, ನಿರ್ದೇಶಕ, ಕಲಾವಿದನಾಗಿ, ಕಿರುತೆರಯಲ್ಲಿ ಹಾಸ್ಯ ಧಾರವಾಹಿಗಳ ನಿರ್ದೇಶಕನಾಗಿ ಹಾಸ್ಯ ಕಲಾವಿದನಾಗಿ ಕರಾವಳಿಯಾದ್ಯಂತ ಜನಮೆಚ್ಚುಗೆ ಗಳಿಸುತ್ತಿರುವ ಪ್ರತಿಭೆಯ ಖನಿ ಪ್ರಶಾಂತ್ ಸಿ.ಕೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ದೇಶಾದ್ಯಂತ ಮನ್ನಣೆಗಳಿಸುವುದರಲ್ಲಿ ಸಂಶಯ ಇಲ್ಲ ಎಂದರು.
ಪ್ರಶಸ್ತಿ ಸ್ವೀಕರಿಸಿದ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ಮಾತನಾಡಿ, ನನ್ನ ತಂದೆ -ತಾಯಿ, ಪತ್ನಿ, ಮಕ್ಕಳ ತ್ಯಾಗವಿದೆ. ನನ್ನ ಜತೆ, ಗುರುಗಳು, ಹಿರಿಯರು, ಕಿರಿಯರು ನನ್ನ ಕಲಾಬದುಕಿನಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಕಲಾಸೇವೆ ಗುರುತಿಸಿ ಈ ಮಹಾನ್ ಪ್ರಶಸ್ತಿಗೆ ಆಯ್ಕೆ ಮಾಡಿದವರಿಗೆ ಕೃತಜ್ಞತೆಗಳು ಎಂದರು.
ಕೆ.ಪಿ. ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ಧರ್ಮದರ್ಶಿ ಕೃಷ್ಣರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಉದ್ಯಮಿ ಸಿರಿಯಣ್ಣ ಶೆಟ್ಟಿ, ಪ್ರಗತಿಪರ ಕೃಷಿಕ ಸತೀಶ್ ಭಟ್ ಕುಂದೇಶ್ವರ, ಕದ್ರಿ ಯಕ್ಷಕೂಟ ಸಂಚಾಲಕ ರಾಮಚಂದ್ರ ಭಟ್ ಎಲ್ಲೂರು, ಸುಧೀಂದ್ರ ಭಟ್, ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಗ್ರಾಮಪಂಚಾಯಿತಿ ಸದಸ್ಯರ ಮಹಾವೀರ ಕಟ್ಟಡ, ಗಂಗಾ ಆರ್.ಭಟ್, ರಂಜಿನಿ, ರಂಗಿಣಿ ಉಪೇಂದ್ರ ರಾವ್, ಇದ್ದರು.
ಹಿರಣ್ಯಾಕ್ಷ ಹಿರಣ್ಯ ಕಶಿಪು ಕನ್ನಡ- ತುಳು ಯಕ್ಷಗಾನ ನಡೆಯಿತು. ಪ್ರಾಪ್ತಿ ಕಲಾವಿದೆರ್ ಕುಡ್ಲ ತಂಡದವರಿಂದ ಮಾಯದಪ್ಪೆ ಮಂತ್ರದೇವತೆ ತುಳು ನಾಟಕ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಹೋಮ್‌ಗಾರ್ಡ್ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು, ಉದಯಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಹಿರ್ಗಾನ ಗ್ರಾಮಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ವರ್ಷಾವಧಿ ಜಾತ್ರೆ, ರಂಗಪೂಜೆ, ದರ್ಶನ ಬಲಿ, ನೇಮೋತ್ಸವ, ಕಟ್ಟೆಪೂಜೆ ಸಂಭ್ರಮದಿಂದ ನಡೆಯಿತು.
ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಮೋದ್ ಮುತಾಲಿಕ್, ಮಂಜುನಾಥ ಪೂಜಾರಿ, ಜಿತೇಂದ್ರ ಕುಂದೇಶ್ವರ ಇದ್ದರು.
Join The Telegram | Join The WhatsApp |