ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ಸಾಗುವುದಕ್ಕಾಗಿ ಕಲ್ಪಿಸಿರುವ ಸುಧಾರಿತ ಸೌಲಭ್ಯಗಳನ್ನು ಒಳಗೊಂಡ ಸಂಕೀರ್ಣ ‘ಶ್ರೀ ಸಾನ್ನಿಧ್ಯವನ್ನು ಮಂಗಳವಾರದಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು.
ಪ್ರತಿ ಅಂಗಣವು ಪ್ರವೇಶ, ನಿರ್ಗಮನ ಮತ್ತು ತುರ್ತುನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಡಿಜಿಟಲ್ ಟಿ.ವಿ.ಗಳ ಮೂಲಕ ಆಧ್ಯಾತ್ಮಿಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಇದರ ನಿರ್ವಹಣೆಗೆ ಸುಧಾರಿತ ಸರದಿ ನಿರ್ವಹಣೆ ವ್ಯವಸ್ಥೆ ( ಕ್ಯುಎಂಎಸ್ )ತಂತ್ರಜ್ಞಾನ ಅಳವಡಿಸಲಾಗಿದೆ.
ಕೃತಕ ಬುದ್ಧಿಮತ್ತೆ ಆಧರಿತ 160 ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ ಮಾಡುವ ಕಣ್ಣಾವಲು ಇಡುವ ವ್ಯವಸ್ಥೆ ಇಲ್ಲಿದೆ. ಇವು ಭಕ್ತಾದಿಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುವುದರೊಂದಿಗೆ ಆತಂಕ ಮುಕ್ತ ವಾತಾವರಣವನ್ನು ನಿರ್ಮಿಸಲಾಗಿದೆ. ಕಲ್ಪಿಸಲಾಗುತ್ತದೆ.
ಬಾಷ್ ವೀಡಿಯೊ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ (ಬಿವಿಎಂಎಸ್) ಮತ್ತು ಡಿಐವಿಆರ್ -2 ಸರ್ವರ್ ಅನ್ನು ಇಲ್ಲಿ ಅಳವಡಿಸಲಲಾಗಿದೆ. ಇದರಲ್ಲಿ ದಾಖಲಾಗುವ ವ್ಯಕ್ತಿಗಳು ಅಥವಾ ವಸ್ತುಗಳನ್ನು ಸುಲಭವಾಗಿ ಗುರುತಿಸಬಹುದು. ಇದು ಭದ್ರತಾ ವ್ಯವಸ್ಥೆಯನ್ನು ದಕ್ಷವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಕ್ಯೂ ಕಾಂಪ್ಲೆಕ್ಸ್ ಮತ್ತು ದೇವಸ್ಥಾನದಲ್ಲಿ ಒಟ್ಟು 263 ಕಡೆ ಧ್ವನಿವರ್ಧಕಗಳನ್ನು ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಮೂಲಕ ಕಮಾಂಡ್ ಸೆಂಟರ್‌ನಿಂದ ನಿರ್ದಿಷ್ಟ ಮತ್ತು ಸಾಮಾನ್ಯ ಪ್ರಕಟಣೆಗಳನ್ನು ನೀಡಲಾಗುತ್ತದೆ. ಭಕ್ತರು ಯಾವುದೇ ಗೊಂದಲವಿಲ್ಲದೆ ದೇವರ ದರ್ಶನ ಮಾಡಲು ಇದು ನೆರವಾಗುತ್ತದೆ.ಪ್ರತೀ ಅಂಗಣದಲ್ಲಿ ಹೈ-ವಾಲ್ಯೂಮ್, ಕಡಿಮೆ-ವೇಗದ (ಎಚ್‌ವಿಎಲ್‌ಎಸ್) ಫ್ಯಾನ್ ಗಳನ್ನು ಅಳವಡಿಸಲಾಗಿದೆ. ಇವುಗಳು ತಾಜಾ ಗಾಳಿಯನ್ನು ಪೂರೈಸಿ ತಾಪಮಾನವನ್ನು ನಿಯಂತ್ರಿಸುತ್ತವೆ.
650ಕಿಲೊ ವಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕವನ್ನು ಇಲ್ಲಿ ಅಳವಡಿಸಲಾಗಿದೆ. ಸಂಪೂರ್ಣ ಸರತಿ ಸಂಕೀರ್ಣದ ವಿದ್ಯುತ್ ಮತ್ತು ನೀರು ನಿರ್ವಹಣೆ ವ್ಯವಸ್ಥೆಯು ಸುಸ್ಥಿರ ಮತ್ತು ಪರಿಸರಸ್ನೇಹಿಯಾಗಿದೆ.
ಇಳಿಜಾರಾದ ಈ ದಾರಿಯಲ್ಲಿ ಜನಸಂದಣಿಯ ಸಮಯದಲ್ಲಿಯೂ ಭಕ್ತರು ಏಕಮುಖವಾಗಿ ಹಾಗೂ ಸುಗಮವಾಗಿ ಸಾಗಬಹುದು.
ಸರತಿ ಸಂಕೀರ್ಣದ ಹೃದಯ ಭಾಗದಲ್ಲಿ, ಸರತಿ ನಿರ್ವಹಣೆ ಸಾಫ್ಟ್‌ವೇರ್, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳು, ಕಣ್ಣಾವಲು, ಸಾರ್ವಜನಿಕ ಮಾಹಿತಿ ವ್ಯವಸ್ಥೆಗಳು, ಡಿಜಿಟಲ್ ಸಂಕೇತಗಳು, ಕಟ್ಟಡ
ನಿರ್ವಹಣಾ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 10 ಸರ್ವರ್ ಗಳನ್ನು ಹೊಂದಿದೆ.ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ್ತು ಅವರ ಪತ್ನಿ ಡಾ.ಸುದೇಶ ಧನ್‌ಕರ್ ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಕ್ಯೂ ಕಾಂಪ್ಲೆಕ್ಸ್ ಅನ್ನು ಉಪ ರಾಷ್ಟ್ರಪತಿಗಳು ಲೋಕಾರ್ಪಣೆಗೊಳಿಸಿದರು.
ಬಳಿಕ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಗದೀಪ್ ಧನ್‌ಕರ್ ಅವರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಇದು ಕೇವಲ ಕಟ್ಟಡ ಮಾತ್ರವಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲರಿಗೂ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು, ಸಮಾನತೆಯನ್ನು ತೋರಿಸುತ್ತದೆ ಎಂದರು.
ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು. ರಾಜಕೀಯವಾಗಿ ನಾವು ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕಿದೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆಯಿದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ತಿಳಿಸಿದರು.
ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ. ದೇಶ ಸೇವೆಗೆ ಜನತೆ ಮುಂದೆ ಬರಬೇಕಿದೆ. ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು, ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ. ದೇಶದಲ್ಲಿ ಸಮಗ್ರತೆ, ವೈವಿಧ್ಯತೆ, ಸೌಹಾರ್ದವನ್ನು ಉಳಿಸಿಕೊಳ್ಳಬೇಕಾಗಿದೆ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಹುಟ್ಟಬೇಕಾಗಿದೆ. ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಉಪರಾಷ್ಟ್ರಪತಿ ಕರೆ ನೀಡಿದರು.
ಉಪ ರಾಷ್ಟ್ರಪತಿ ನುಡಿ :
ಈ ಸಂದರ್ಭದಲ್ಲಿ ನಡೆದ ಭವ್ಯ ಸಮಾರಂಭ ಉದ್ದೇಶ ಈ ಮಾತನಾಡಿದ ಉಪರಾಷ್ಟ್ರಪತಿಗಳು,
ಭಾರತ ಹಿಂದೆಂದಿಗಿಂತಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಅಂತಹ ಶಕ್ತಿಗಳ ಕುರಿತು ಜನ ಎಚ್ಚರವಾಗಿರಬೇಕು ಎಂದು ಹೇಳಿದರು.ಜಗತ್ತೇ ನಮ್ಮ ದೇಶದತ್ತ ಮುಖಮಾಡಿದೆ. ಇನ್ನೊಂದೆಡೆ ಭಾರತ ವಿರೋಧಿ ಶಕ್ತಿಗಳು, ದೇಶದ ಸಾರ್ವಭೌಮ ಹಿತಾಸಕ್ತಿಯ ವಿರುದ್ಧ ಇರುವ ಶಕ್ತಿಗಳು ಹಾಗೂ ದೇಶದ ಅಭಿವೃದ್ಧಿ ಸಹಿಸದ ಶಕ್ತಿಗಳು ಒಗ್ಗೂಡುತ್ತಿವೆ. ಅವು ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಬಯಸುತ್ತಿವೆ. ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ಹಚ್ಚಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
ಬೀದಿಗಿಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಷ್ಟು ಕೆಳಮಟ್ಟಕ್ಕೂ ಅವರು ಇಳಿಯುತ್ತಾರೆ. ಸಾರ್ವಜನಿಕ ಸ್ವತ್ತುಗಳನ್ನೂ ನಾಶ ಪಡಿಸುತ್ತಾರೆ. ಇದು ನಾಚಿಕೆಗೇಡಿನ ವಿಷಯ. ಭಾರತದಂತ ದೇಶದಲ್ಲಿ ಇದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗುವವರು ದೇಶದ ಶತ್ರುಗಳು. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಅವರಿಂದಾಗಿ 145 ಕೋಟಿ ಜನ ಸಮಸ್ಯೆ ಎದುರಿಸುವುದಕ್ಕೆ ಅವಕಾಶ ನೀಡಬಾರದು. ಅಂತಹವರನ್ನು ಒಂಟಿಯಾಗಿಸಬೇಕು ಎಂದರು.
ರಾಜಕಾರಣಿಗಳಿಗೆ ಸಿದ್ದಾಂತ ಮುಖ್ಯ. ಅಧಿಕಾರವೇ ರಾಜಕೀಯದ ಉದ್ದೇಶ ಆಗಬಾರದು. ದಿನದ ಇಪ್ಪತ್ತನಾಲ್ಕು ಗಂಟೆಗಳನ್ನೂ ರಾಜಕೀಯ ಲಾಭ ಗಳಿಕೆಗಾಗಿಯೆ ಬಳಸುವುದಲ್ಲ. ದೇಶಕ್ಕೆ ಸೇವೆ ಸಲ್ಲಿಸುವುದೇ ರಾಜಕಾರಣಿಗಳ ಧೈಯವಾಗಬೇಕು ಎಂದರು.
ವೈವಿಧ್ಯವೇ ಭಾರತದ ವ್ಯಾಖ್ಯಾನ. ಅದೇ ದೇಶದ ಒಗ್ಗಟ್ಟಿನ ಮೂಲ. ನಾವು ಜಾಗತಿಕ ಭ್ರಾತೃತ್ವದಲ್ಲಿ ನಂಬಿಕೆ ಇಟ್ಟವರು. ಆದರೆ ಇತ್ತೀಚೆಗೆ
ಸಾಮರಸ್ಯ ಹದಗೆಡುತ್ತಿದೆ. ಸಮಾಜ ಧ್ರುವೀಕರಣಗೊಳ್ಳುತ್ತಿದೆ. ಇದನ್ನೆಲ್ಲ ನೋಡುವಾಗ ಕಳವಳವಾಗುತ್ತದೆ. ನಾವು ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. 5 ಸಾವಿರಕ್ಕೂ ಅಧಿಕ ವರ್ಷಗಳ ನಾಗರಿಕತೆ ಹೊಂದಿರುವ ದೇಶ ನಮ್ಮದು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರುಸಂವಾದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೆರಡೂ
ಪ್ರಜಾಪ್ರಭುತ್ವದ ಜೀವಾಳ. ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿ ಸಂವಾದ ಪ್ರಕ್ರಿಯೆಯನ್ನು ಕಡೆಗಣಿಸಿದರೆ, ಪ್ರಜಾಪ್ರಭುತ್ವದ ಆಶಯ ಈಡೆರಿಸುವಲ್ಲಿ ನಾವು ವಿಫಲವಾಗುತ್ತೇವೆ. ಸಂವಾದವು ಅಸಮಾನತೆಯಿಂದ ಮುಕ್ತಿ ನೀಡಲು ದಾರಿಯಾಗಬಲ್ಲುದು. ಸಕಾರಾತ್ಮಕ ಪ್ರಯತ್ನ ಸಮಸ್ಯೆ ಬಗೆಹರಿಸಲು ನೆರವಾಗಬಲ್ಲುದು ಎಂದರು.ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳವುದು ಜನಪ್ರತಿನಿಧಿಗಳ ಸಂವಿಧಾನ ಬದ್ಧ ಕರ್ತವ್ಯ. ಆದರೆ ಅವರು ಅದಕ್ಕೇ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬೇಸರ ತೋಡಿಕೊಂಡರು.
ಜನತಂತ್ರದ ದೇಗುಲವಾದ ಸಂಸತ್ತು ಜನರ ಭಾವನೆಗಳನ್ನು ಮತ್ತಷ್ಟು ಪ್ರಖರವಾಗಿ ವ್ಯಕ್ತಪಡಿಸುವ ಜೀವಂತಿಕೆಯ ತಾಣವಾಗಬೇಕು ಎಂದರು.
ದೇಶವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ದಾಪುಗಾಲಿಡುತ್ತಿದೆ. ಇದರ ನಾಲ್ಕು ಚರಣಗಳಲ್ಲಿ ನಾವು ಕೊನೆಯ ಹಂತದಲ್ಲಿದ್ದೇವೆ. ಈ ಸಂದರ್ಭದಲ್ಲಿ ಜನರಿಂದ ಆಯ್ಕೆಯಾದವರು ಸಂಸತ್ತಿನಂತದ ಪವಿತ್ರ ತಾಣದಲ್ಲಿ ಸಂವಾದ ಕ್ಕೆ ಮಹತ್ವ ನೀಡಬೇಕು. ಜನರ ಸಮಸ್ಯೆಗಳಿಗೆ, ಅಶೋತ್ತರಗಳಿಗೆ ಸ್ಪಂದಿಸಬೇಕು ಎಂದರು.
ಸಾನ್ನಿಧ್ಯ ಸಂಕೀರ್ಣದ ಅತ್ಯಾಧುನಿಕ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಕ್ತರು ದೇವರ
ದರ್ಶನಕ್ಕಾಗಿ ಕಾಯುವ ಅವಧಿಯನ್ನು ಹಿತಕರವಾಗಿ ಕಳೆಯಲು ಸಕಲ ಸೌಕರ್ಯ ಕಲ್ಪಿಸಲಾಗಿದೆ. ಇದು ಕೇವಲ ಕಟ್ಟಡ ಮಾತ್ರವಲ್ಲ. ಸೇವೆಯ ದ್ಯೋತಕ. ಇಲ್ಲಿರುವ ಅದ್ಭುತ ಸೌಕರ್ಯಗಳು ಭಕ್ತರ ಬಗ್ಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದರು.ಭಾರತವು ಪ್ರಪಂಚದ ಆಧ್ಯಾತ್ಮಿಕ ಕೇಂದ್ರ. ಅದಕ್ಕೆ ಈ ಕ್ಷೇತ್ರಕ್ಕಿಂತ ಒಳ್ಳೆಯ ಪುರಾವೆ ಬೇರೆ ಸಿಗದು. ಮಂಜುನಾಥ ಸ್ವಾಮಿಯ ಈ ಕ್ಷೇತ್ರ ಸತ್ಕಾರ್ಯ, ಸಾಮರಸ್ಯ ಶಾಂತಿಯ ಪ್ರತೀಕ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಭಕ್ತರ ಅವಶ್ಯಕತೆಗೆ ಅನುಗುಣವಾಗಿ ಶ್ರೀಸಾನ್ನಿಧ್ಯವನ್ನು ನಿರ್ಮಿಸಲಾಗಿದೆ. ಬೇಸಿಗೆ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.
ನೂತನ ಸಂಕೀರ್ಣದ ವಿಶೇಷತೆ: ಶ್ರೀ ಸಾನ್ನಿಧ್ಯ ಸಂಕೀರ್ಣವು 2,75,177 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ವೃತ್ತಾಕಾರದಲ್ಲಿರುವ, ಎರಡು ಅಂತಸ್ತುಗಳನ್ನು ಒಳಗೊಂಡ ಈ ಸಂಕೀರ್ಣದಲ್ಲಿ 16 ವಿಶಾಲ ನಿರೀಕ್ಷಣಾ ಕೊಠಡಿಗಳಿವೆ. ಪ್ರತಿ ನಿರೀಕ್ಷಣಾ ಕೊಠಡಿಗಳಲ್ಲಿ ಒಮ್ಮೆಗೆ 600 ರಿಂದ 800 ಜನರು ಕುಳಿತುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಕೀರ್ಣವು ಏಕಕಾಲದಲ್ಲಿ 10 ಸಾವಿರದಿಂದ 12 ಸಾವಿರ ಮಂದಿ ಸಾಗುವುದಕ್ಕೆ ವ್ಯವಸ್ಥೆ ಇಲ್ಲಿದೆ. ಈ ಸಂಕೀರ್ಣದಲ್ಲಿ ಭಕ್ತರು ಸಾಲುಗಳಲ್ಲಿ
ನಿಂತು ಕಾಯುವ ಬದಲು ಆರಾಮವಾಗಿ ಮುಂದೆ ಸಾಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವೀರೇಂದ್ರ ಹೆಗ್ಗಡೆ ಮಾಹಿತಿ ನೀಡಿದರು.ಜ್ಞಾನದೀಪ ಶಿಕ್ಷಣ ಕಾರ್ಯಕ್ರಮಕ್ಕೆಚಾಲನೆ:
ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ, ಅದನ್ನು ಬಲಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ದ 2024-25 ನೇ ಸಾಲಿನ ಚಟುವಟಿಕೆಗಳಿಗೆ ಉಪರಾಷ್ಟ್ರಪತಿಯವರು ಚಾಲನೆ ನೀಡಿದರು.‘ಗ್ರಾಮೀಣ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ವಿತರಣೆ,
ಶಿಕ್ಷಕರ ಕೊರತೆ ಇರುವ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ನೇಮಕ, ಶಾಲೆಗಳಿಗೆ ಬೆಂಚ್-ಡೆಸ್ಕ್ ಗಳ ಪೂರೈಕೆ, ಶಾಲಾಕಟ್ಟಡ, ಆಟದ ಮೈದಾನಗಳು, ಶೌಚಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವವನ್ನು ಈ ಕಾರ್ಯಕ್ರಮದ ಅಡಿ ನೀಡಲಾಗುತ್ತದೆ. ಈ ಸಾಲಿನಲ್ಲಿ ಗ್ರಾಮೀಣ ಪ್ರದೇಶದ 65 ಸಾವಿರ ಮಕ್ಕಳಿಗೆ ಪ್ರತಿ ತಿಂಗಳು ವಿದ್ಯಾರ್ಥಿವೇತನ ನೀಡುವ ಗುರಿ ನಿಗದಿಪಡಿಸಲಾಗಿದೆ. ಈ ಸಾಲಿನಲ್ಲಿ ಗ್ರಾಮೀಣ ಶಾಲೆಗಳಿಗೆ 1,028 ಶಿಕ್ಷಕರನ್ನು ನೇಮಿಸಲಾಗಿದೆ. ಇದುವರೆಗೆ 9.278 ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಗ್ರಾಮೀಣ ಶಾಲೆಗಳಿಗೆ 4 ಸಾವಿರ ಬೆಂಚ್-ಡೆಸ್ಕ್ ವಿತರಿಸಲಾಗಿದೆ. ಇದುವರೆಗೆ 71,454 ಜೊತೆ ಬೆಂಚ್-ಡೆಸ್ಕ್ ಗಳನ್ನು ವಿತರಿಸಲಾಗಿದೆ’ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.ಇದುವರೆಗೆ 6.821 ಪ್ರಾಥಮಿಕ ಶಾಲೆಗಳು, 1.019 ಅಂಗನವಾಡಿಗಳು/ಬಾಲವಾಡಿಗಳು, 4,982 ಆಟದ ಮೈದಾನಗಳು, 787 ಶೌಚಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ಪಡೆದಿವೆ.
ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಧನಕರ್ ಅವರ ಪತ್ನಿ ಸುದೇಶ್ ಧನಕರ್, ಹೇಮಾವತಿ ವಿ. ಹೆಗ್ಗಡೆ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಭಾಗವಹಿಸಿದ್ದರು. ನಿಶ್ಮಿತಾ, ಪುನೀತ್ ಎಂ.ಎನ್. ಅವರು ವಿದ್ಯಾರ್ಥಿ ವೇತನ ಸ್ವೀಕರಿಸಿದರು.