ಭಟ್ಕಳ: ತಾಲೂಕಿನ ವೆಂಕಟಾಪುರ ಬಪ್ಪುಂಡದ ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ಕುರಿತು ಭಕ್ತಿಗೀತೆಗಳ ಅಲ್ಬಮ್‌ ರವಿವಾರ ಬಿಡುಗಡೆಗೊಂಡಿತು.
ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಈ ಭಕ್ತಿಗೀತೆ ಅಲ್ಬಮ್ ನಿರ್ಮಾಣ ಮಾಡಲಾಗಿದ್ದು,
ಇಲ್ಲಿನ ಹಾಡುಗಳನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸುಗಮಸಂಗೀತ ಗಾಯಕ ಭಾವಕವಿ ಉಮೇಶ ಮುಂಡಳ್ಳಿ ಅವರು ಸಾಹಿತ್ಯ ಬರೆದು ಸ್ವರಸಂಯೋಜಿಸಿ ತಾವೇ ಹಾಡಿರುತ್ತಾರೆ.
ಯಾವ ಜನ್ಮದು ನಂಟು ಯಕ್ಷ ಚೌಡೇಶ್ವರಿ ಹಾಗೂ ಬಾರಮ್ಮ ತಾಯೆ ಯಕ್ಷ ಚೌಡೇಶ್ವರಿ ಎನ್ನುವ ಈ ಸುಮಧುರ ಗೀತೆಗೆ ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹಾಗೂ ತಬಲ ದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದ್ದಾರೆ.
ದೇವಸ್ಥಾನದ ಐದನೇ ವರ್ಷದ ವರ್ಧಂತಿ ಉತ್ಸವದ ಮೊದಲ ದಿನವಾದ ರವಿವಾರ ರಾತ್ರಿ ಭಕ್ತಜನರ ಸಮ್ಮುಖದಲ್ಲಿ ಈ ಭಕ್ತಿ ಗೀತೆ ಅಲ್ಬಮ್ ನ್ನು ವೇದಮೂರ್ತಿ ಸುಬ್ರಮಣ್ಯ ಪಂಡಿತರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗಾಯಕ ಕವಿ ಸ್ವರ ಸಂಯೋಜಕ ಉಮೇಶ ಮುಂಡಳ್ಳಿ, ದೇವಸ್ಥಾನದ ಮುಖ್ಯಸ್ಥರಾದ ಶ್ರೀಧರ ನಾಯ್ಕ, ಆದಿತ್ಯ ದೇವಾಡಿಗ, ಹರೀಶ್ ಶೇಟ್ ಧಾರೇಶ್ವರ, ದೀಕ್ಷಾ ಖಾರ್ವಿ ಮೊದಲಾದವರು ಹಾಜರಿದ್ದರು.
ನಂತರ ಉಮೇಶ ಮುಂಡಳ್ಳಿ ಅವರ ನಿನಾದ ಸಂಗೀತ ಸಂಚಯದವರಿಂದ ಎರಡು ಗಂಟೆಗಳ ಕಾಲ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವತಿಯಿಂದ ಉಮೇಶ ಮುಂಡಳ್ಳಿ ಹಾಗೂ ಬಳಗದವರನ್ನು ಸನ್ಮಾನಿಸಲಾಯಿತು.