ಬಂಟ್ವಾಳ : ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ, ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಬಿಲ್ಲವ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕಿ ಕವಿತಾ ಸನಿಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬಂಟ್ವಾಳದ ಬಿಸಿ ರೋಡ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕವಿತಾ ಸನಿಲ್ ಮತ್ತು ಬಂಟ್ವಾಳದ ತಾಲೂಕು ಪಂಚಾಯತ್ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ
ಸಮಾವೇಶದಲ್ಲಿ ಮಾತನಾಡಿದ ಕವಿತಾ ಸನಿಲ್, ಹುಬ್ಬಳ್ಳಿಯ ನೇಹಾ ಎಂಬ ವಿದ್ಯಾರ್ಥಿನಿಯನ್ನು ಹಾಡಹಗಲೇ ಕೊಲೆ ಮಾಡಿದ ಘಟನೆ ಕುರಿತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ ಎಂದು ಇವರಲ್ಲಿ ಕೇಳಬೇಕಾಗಿದೆ. ಕಳೆದ ಕೆಲವು ತಿಂಗಳಲ್ಲಿ ಕೊಲೆ ಸರಣಿಯೇ ಆಗಿ ಹೋಗಿದೆ. ಇದು ಇವರ ಆಡಳಿತ ಸ್ಥಿತಿ. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಿರುವುದು ನಮ್ಮೆಲ್ಲರ ಭಾಗ್ಯ. ಈ ಸಲದ ಚುನಾವಣೆ ಮೋದಿಗಾಗಿ. ರಾಮನಿಗಾಗಿ ಕೊಡುವ ಮತ. ಈ ಬಾರಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ನಾವು ಗೆಲ್ಲಿಸಬೇಕಾಗಿದೆ ಎಂದರು

ನನ್ನ ರಾಜಕೀಯ ಗುರು ಜನಾರ್ದನ ಪೂಜಾರಿ ಆಶೀರ್ವಾದ ಪಡೆದು ಇಲ್ಲಿ ಬಂದಿದ್ದೇನೆ. ಒಳ್ಳೆಯದಾಗುವುದಿದ್ದರೆ ಹೋಗು ಎಂದು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತ ಇದೆ, ಏನೋ ಆಸೆ ಇಟ್ಟುಕೊಂಡು ಬಿಜೆಪಿ ಸೇರಿದ್ದೇನೆ ಎಂದು ಅಂದೊಳ್ಳಬೇಡಿ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಇಲ್ಲ. ಪ್ರಧಾನಿ ಮೋದಿಯವರ ಆಡಳಿತ ನೋಡಿ ಬಿಜೆಪಿ ಸೇರುತ್ತಿದ್ದೇನೆ. ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ ಎಂದು ಹೇಳಿದರು.