ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂ.ಗಳೊಂದಿಗೆ ಅತ್ಯಂತ ಬಡವರು ಎಂದು ಸೋಮವಾರ ಬಿಡುಗಡೆಯಾದ ಅಸೋಸಿಯೇಷನ್ ​​​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂಪಾಯಿ ಎಂದು ವರದಿ ಹೇಳಿದೆ. ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ 2023-2024ಕ್ಕೆ ಸರಿಸುಮಾರು 1,85,854 ರೂ.ಗಳಾಗಿದ್ದರೆ ಮುಖ್ಯಮಂತ್ರಿಯ ಸರಾಸರಿ ಸ್ವಯಂ ಆದಾಯವು 13,64,310 ರೂ.ಗಳಾಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು ಎಂದು ಎಡಿಆರ್‌ ವರದಿ ತಿಳಿಸಿದೆ.

31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂ.
ಅರುಣಾಚಲ ಪ್ರದೇಶದ ಪೆಮಾ ಖಂಡು ಅವರು ಒಟ್ಟು 332 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಭಾರತದ ಎರಡನೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದು, ಮೂರನೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಡಿಆರ್‌ ವರದಿ ಹೇಳಿದೆ.
55 ಲಕ್ಷ ಆಸ್ತಿ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ದೇಶದ ಎರಡನೇ ಬಡ ಮುಖ್ಯಮಂತ್ರಿಯಾಗಿದ್ದು, 1.18 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಪಿಣರಾಯಿ ವಿಜಯನ್ ಮೂರನೇ ಬಡ ಮುಖ್ಯಮಂತ್ರಿಯಾಗಿದ್ದಾರೆ.

ಖಂಡು ಅವರು 180 ಕೋಟಿ ರೂ.ಗಳಷ್ಟು ಹೆಚ್ಚಿನ ಸಾಲ ಹೊಂದಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 23 ಕೋಟಿ ರೂ. ಸಾಲವಿದ್ದರೆ ಮತ್ತು ಚಂದ್ರಬಾಬು ನಾಯ್ಡು ಅವರಿಗೆ 10 ಕೋಟಿ ರೂ.ಗಳಿಗೂ ಹೆಚ್ಚು ಸಾಲವಿದೆ ಎಂದು ವರದಿ ತಿಳಿಸಿದೆ.

ಮೂವರು ಮುಖ್ಯಮಂತ್ರಿಗಳು ₹ 50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದರೆ, ಒಂಬತ್ತು ಮುಖ್ಯಮಂತ್ರಿಗಳು ₹ 11 ಕೋಟಿಯಿಂದ ₹ 50 ಕೋಟಿ ವರೆಗಿನ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ.
ಶೈಕ್ಷಣಿಕ ಅರ್ಹತೆಯಲ್ಲಿ, 31 ಮುಖ್ಯಮಂತ್ರಿಗಳಲ್ಲಿ 10 ಮಂದಿ ಪದವೀಧರರಾಗಿದ್ದರೆ, ಇಬ್ಬರು ಮುಖ್ಯಮಂತ್ರಿಗಳು ಡಾಕ್ಟರೇಟ್ ಪದವಿ ಹೊಂದಿದ್ದಾರೆ. ಆರು ಮುಖ್ಯಮಂತ್ರಿಗಳು 71 ರಿಂದ 80 ವರ್ಷದೊಳಗಿನವರಾಗಿದ್ದರೆ, 12 ಮುಖ್ಯಮಂತ್ರಿಗಳು 51 ರಿಂದ 60 ವರ್ಷದೊಳಗಿನವರು ಎಂದು ವರದಿ ಹೇಳಿದೆ. 13 (ಶೇ. 42) ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದರೆ, 10 (ಶೇ. 32) ಮಂದಿ ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. 31 ಮುಖ್ಯಮಂತ್ರಿಗಳ ಪೈಕಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ ಈ ಇಬ್ಬರು ಮಾತ್ರ ಮಹಿಳೆಯರಾಗಿದ್ದಾರೆ.