ಮೈಸೂರು : ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಾಪಸ್ ಪಡೆಯುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೈಸೂರು ಕಲಾಮಂದಿರದಲ್ಲಿ ಪ. ಮಲ್ಲೇಶ್ – 90 ಸ್ಮರಣಾರ್ಥ ವಿಚಾರದಲ್ಲಿ ಶುಕ್ರವಾರ ಮಾತನಾಡಿದರು.
ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 3000 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಐದನೇ ತರಗತಿವರೆಗೂ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲು ಹೊರಟಿದ್ದಾರೆ. ಅದನ್ನು ತಪ್ಪಿಸಬೇಕು ಎಂದು ಕೋರಿದರು.
ಪ.ಮಲ್ಲೇಶ್ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕು ಎಂದು ಹೋರಾಟ ನಡೆಸಿದವರು. ಈಗ ನೀವು 2015 ರಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕು ಎಂದು ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿದ್ದೀರಿ ಎಂದು ಅವರು ಮುಖ್ಯಮಂತ್ರಿಗೆ ನೆನಪಿಸಿದರು.
ಪ.ಮಲ್ಲೇಶ್ ಅವರು ಕನ್ನಡ ಮಾಧ್ಯಮದ ಬಗ್ಗೆ ಹೊಂದಿದ್ದ ಬದ್ಧತೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಕ್ರಮ ವಹಿಸುವುದಾಗಿ ಸಿದ್ದರಾಮಯ್ಯ ಉತ್ತರ ನೀಡಿದರು.