ಬೆಂಗಳೂರು: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಮತ್ತು ವಿಕಲ ಚೇತನರ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಂದು ತಮ್ಮನ್ನು ಭೇಟಿ ಮಾಡಿದ ಅಂಗನವಾಡಿ ಮತ್ತು ವಿಕಲಚೇತನರ ಸಂಘಟನೆಗಳ ನಿಯೋಗಕ್ಕೆ ಈ ಭರವಸೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ 11500, 10,000 ಹಾಗೂ ಸಹಾಯಕಿಯರಿಗೆ 6000 ರೂ.ಗಳು ಸದ್ಯ ದೊರಕುತ್ತಿದೆ. ಗೌರವ ಧನವನ್ನು ಹೆಚ್ಚಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಕೇಂದ್ರದಿಂದ ಬರುತ್ತಿರುವ ಅನುದಾನ ಬರುತ್ತಿಲ್ಲವಾದ್ದರಿಂದ ಆಗುತ್ತಿರುವ ಸಮಸ್ಯೆಗಳನ್ನೂ ಕಾರ್ಯಕರ್ತೆಯರು ಮುಂದಿಟ್ಟು ಸರ್ಕಾರದ ನೆರವು ಕೋರಿದರು.

ಈಗಾಗಲೇ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಿಸಲಾಗಿದೆ. ಅದೇ ರೀತಿ ಅಂಗನವಾಡಿ ಕೇಂದ್ರಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನವನ್ನು 1000 ರೂ ಹೆಚ್ಚಿಸುವಂತೆ ಕೋರಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ತಮ್ಮ‌ಕುಟುಂಬಗಳಿಗೆ, ತಮ್ಮ ಸಮುದಾಯಕ್ಕೆ ಆಗಿರುವ ಅನುಕೂಲಗಳನ್ನು ವಿವರಿಸಿ ಮುಖ್ಯಮಂತ್ರಿಗಳಿಗೆ ಕಾರ್ಯಕರ್ತೆಯರು ಅಭಿನಂದಿಸಿದರು.

ಮನೆ ಯಜಮಾನಿಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2000 ರೂ.ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಒದಗಿಸಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳಿಂದ ಮನೆ ನಿರ್ವಹಣೆ ಮಾಡುವ ಮಹಿಳೆಯರಿಗೆ ಸಹಾಯವಾಗಿದೆ. ಸರ್ಕಾರ ನಿಮ್ಮ ಪರವಾಗಿದೆ ಎಂದು ಭರವಸೆ ನೀಡಿದರು. ಶೇ 60 ರಷ್ಟು ಅಂಗನವಾಡಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ದೊರೆಯುತ್ತಿದೆ. ಇತರೆ ಬೇಡಿಕೆಗಳ ಬಗ್ಗೆಯೂ ಪರಿಗಣಿಸಲಾಗುವುದು ಎಂದು ಸಿಎಂ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಸುಮಾರು 20 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಡಾ: ತ್ರಿಲೋಕಚಂದ್ರ , ಸಿಐಟಿಯು ಮುಖ್ಯಸ್ಥೆ ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.