ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಮಾಂಕಿತ ಕಟೀಲು ಮೇಳಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾ ತಂಡಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಯಾತ್ರಾ ಸ್ಥಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದೆ ಈ ಯಕ್ಷಗಾನ ತಂಡಗಳು. ಕಟೀಲು ಮೇಳವು ಒಟ್ಟು ಆರು ತಂಡಗಳನ್ನು ಹೊಂದಿದ್ದು ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.

ಸುಮಾರು ೧೫೦ ವರ್ಷಗಳ ಇತಿಹಾಸವಿರುವ ಕಟೀಲು ಮೇಳ ೧೯೭೫ ನೇ ಇಸವಿಯಲಿ ವ್ಯವಸ್ಥಿತ ಎರಡನೇ ಮೇಳವನ್ನು ಪ್ರಾರಂಭಿಸಿತು. ೧೯೮೨ ರಲ್ಲಿ ಮೂರನೇ ಮೇಳ, ೧೯೯೩ ರಲ್ಲಿ ನಾಲ್ಕನೇ ಮೇಳ, ೨೦೧೦ರಲ್ಲಿ ಐದನೇ ಮೇಳ, ೨೦೧೩ ರಲ್ಲಿ ಆರನೇ ಮೇಳ ಪ್ರಾರಂಭಿಸಿತ್ತು. ಕಟೀಲು ಮೇಳಕ್ಕೆ ದಿನವೊಂದಕ್ಕೆ ೪-೫ ಹರಕೆಯಾಟಗಳ ಬುಕ್ಕಿಂಗ್ ನಡೆಯುತ್ತದೆ. ಕಟೀಲು ಮೇಳದಿಂದ ನಡೆಯುವ ಯಕ್ಷಗಾನ ಪ್ರದರ್ಶನದ ಉದ್ದೇಶ ಧನ ಸಂಪಾದನೆಯಾಗಿರದೆ, ಕರಾವಳಿ ಭಾಗದ ಆರಾಧನಾ ಕಲೆಯಾಗಿ ಪೌರಾಣಿಕ ಕಥಾನಕಗಳು ಪ್ರದರ್ಶನಗೊಳ್ಳುತ್ತವೆ.

ಸರ್ವಾಭೀಷ್ಟ ಸಿದ್ಧಿಗಾಗಿ ಆಟ ಆಡಿಸುವ ಭಕ್ತರು ಇದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಹಣ ಸಂಗ್ರಹಿಸಿ ಆಟ ಆಡಿಸುವ ಭಕ್ತರೂ ಇದ್ದಾರೆ. ಅಷ್ಟೆ ಅಲ್ಲದೆ ಇ೦ತಿಸ್ಟು ಆಟಗಳನ್ನು ನೋಡುತ್ತೆವೆ ಎ೦ದು ಹರಕೆ ಹೆಳುವ ಭಕ್ತರೂ ಇದ್ದಾರೆ. ಮುಸ್ಲಿಂ, ಕ್ರೈಸ್ತರೂ ಹರಿಕೆ ಆಟ ಆಡಿಸುತ್ತಾರೆ. ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯುವಾಗ ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆಯಿದೆ.

ಭಕ್ತಿ-ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಶುದ್ಧ ಭಾಷೆ, ಸಾಹಿತ್ಯದ ಬಳಕೆಯ ಪ್ರಬಲ ಮಾಧ್ಯಮ. ಯಕ್ಷಗಾನ ನಾಟ್ಯಪ್ರಿಯೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಿಂದ ಪ್ರವರ್ತಿತ ಆರು ದಶಾವತಾರ ಮೇಳಗಳು ಈ ವರ್ಷದ ತಿರುಗಾಟದ 82ನೇ ದಿನ ಎಲ್ಲ ಆರು ಕಡೆಗಳಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶಿಸುವ ಮೂಲಕ ಕಟೀಲು ಯಕ್ಷಗಾನವೆಂದರೆ ಸೇವಾಕರ್ತರಿಗೆ ಭಕ್ತಿ-ಸಂಸ್ಕೃತಿ-ಶ್ರದ್ಧೆ ಸಂಸ್ಕಾರಗಳ ಸಮ್ಮಿಳಿತ ರೂಪ ಎಂಬುದನ್ನು ಸಾಬೀತುಪಡಿಸಿದೆ.

ಇದು ಈ ವರ್ಷದ ತಿರುಗಾಟದ ಮೊದಲನೇ ಸಂದರ್ಭ.ಕಳೆದ ವರ್ಷದ ತಿರುಗಾಟದಲ್ಲಿ ಒಂದೇ ದಿನ ಆರು ಕಡೆಗಳಲ್ಲಿ ದೇವಿ ಮಹಾತ್ಮೆ ಆರು ಬಾರಿ ಪುನರಾವರ್ತನೆಗೊಂಡಿತ್ತು. 2025ರ ಫೆ.14ರಂದು ಉಪ್ಪಿನಂಗಡಿ, ಸಜಿಪನಡು, ಕಲ್ಲಮುಂಡ್ಕೂರು, ಬೊಂಡಾಲ(ಬಂಟ್ವಾಳ), ಬಟ್ಟಕೋಡಿ-ಕಿನ್ನಿಗೋಳಿ ಹಾಗೂ ಸಾಲಿಗ್ರಾಮಗಳಲ್ಲಿ ಕಟೀಲಿನ ಆರು ಮೇಳಗಳಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿದೆ.82 ದಿನಗಳ ತಿರುಗಾಟದ ದೀರ್ಘಾವಧಿಯಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಕೇವಲ 18 ಪ್ರದರ್ಶನಗಳನ್ನು ಮಾತ್ರ ಕಂಡಿದೆ. ಪೂರ್ತಿ ಆಟ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ಕಾಲಮಿತಿಯ ವ್ಯವಸ್ಥೆಯಲ್ಲಿ ಪೂರ್ತಿ ಯಕ್ಷಗಾನ ನೋಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಫೆ.1ರಂದು ಪೆರ್ಮುದೆ ಕುಡುಬಿ ಸಮಾಜ ಮತ್ತು ಹತ್ತು ಸಮಸ್ತರ ಕಟೀಲು ಯಕ್ಷಗಾನ ಬಯಲಾಟ 50ನೇ ವರ್ಷದ ಸುವರ್ಣ ಸಂಭ್ರಮ ಪ್ರದರ್ಶನದಲ್ಲಿ ಪಾಲ್ಗೊಂಡ ಜನಸಾಗರ ದಾಖಲೆಯ 12ರಿಂದ 15 ಸಾವಿರ ಮಂದಿ. ಈ ಬಾರಿ ಕಟೀಲು ಯಕ್ಷಗಾನ ಸೇವೆಯ ರಜತ ವರ್ಷಾಚರಣೆ, ಸುವರ್ಣ ವರ್ಷಾಚರಣೆ(50 ವರ್ಷ) ಸಂಭ್ರಮಗಳ ವಿಜೃಂಭಣೆ ಸಾಕಷ್ಟಿವೆ. 82 ದಿನಗಳಲ್ಲಿ 246 ಪ್ರದರ್ಶನ2024-25ರ ತಿರುಗಾಟ ನ.26ರಿಂದ ಪ್ರಾರಂಭಗೊಂಡು ಫೆ.14ಕ್ಕೆ 82 ದಿನಗಳಾಗಿದ್ದು ಈವರೆಗೂ ಒಟ್ಟು 492 ಪ್ರದರ್ಶನಗಳ ಪೈಕಿ ಬರೋಬ್ಬರಿ ಶೇ.50 ರಷ್ಟು ಅಂದರೆ 246 ಬಾರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವೇ ಪ್ರದರ್ಶನಗೊಂಡಿದೆ.

ದೇವಿ ಮಹಾತ್ಮೆ ಪ್ರದರ್ಶನದ ಗಮನಾರ್ಹ ಅಂಶಗಳು: ಈವರೆಗೂ ಒಂದೇ ದಿನ 6 ದೇವಿ ಮಹಾತ್ಮೆ-1, ಒಂದೇ ದಿನ 5-9 ಬಾರಿ, ಒಂದೇ ದಿನ 4-19 ಬಾರಿ, ಒಂದೇ ದಿನ 3-21 ಬಾರಿ, ಒಂದೇ ದಿನ 2-21 ಬಾರಿ ಹಾಗೂ ಒಂದೇ ದಿನ ಒಂದೇ ಕಡೆ 6 ಬಾರಿ ಪ್ರದರ್ಶನಗೊಂಡಿದೆ.ಈವರೆಗಿನ ತಿರುಗಾಟದ ಎಲ್ಲ 82 ದಿನಗಳಲ್ಲಿಯೂ ದೇವಿ ಮಹಾತ್ಮೆ ಪ್ರದರ್ಶನಗೊಂಡಿದೆ. ಕಟೀಲು ಕ್ಷೇತ್ರದ ಸರಸ್ವತೀ ಸದನ, ಮಹಾಲಕ್ಷ್ಮೀ ಸದನಗಳಲ್ಲಿ ಒಟ್ಟು 82 ದಿನಗಳ ತಿರುಗಾಟದಲ್ಲಿ 16 ದಿನಗಳಲ್ಲಿ ಮಾತ್ರ ಪ್ರದರ್ಶನಗಳಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕಟೀಲು ಮತ್ತು ಪರಿಸರದಲ್ಲಿ ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಹಾಗೂ ಶ್ರೀ ದೇವಿ ಲಲಿತೋಪಖ್ಯಾನ ಪ್ರಸಂಗಗಳ ಪ್ರದರ್ಶನ ಯಾವುದೇ ಮೇಳದಿಂದ ನಿಷಿದ್ಧ.

ಇನ್ನೂ 98 ದಿನಗಳ ತಿರುಗಾಟ ಬಾಕಿ: ಮೇ 25 ಪತ್ತನಾಜೆ ಸೇವೆಯಾಟ. ಅಲ್ಲಿವರೆಗೂ ಇನ್ನೂ 98 ದಿನಗಳಲ್ಲಿ ಆರು ಮೇಳಗಳಿಂದ 588 ಪ್ರದರ್ಶನಗಳು ನಡೆಯಲಿವೆ. ವರ್ಷದ ತಿರುಗಾಟದ ಮುಕ್ತಾಯಕ್ಕೆ ದೇವಿ ಮಹಾತ್ಮೆ ಪ್ರದರ್ಶನ 500ರ ಗಡಿ ದಾಟಿದ ಪ್ರದರ್ಶನ ಬಹುತೇಕ ವರ್ಷಗಳಲ್ಲಿ ನೀಡಿರುವುದು ಕಟೀಲು ಮೇಳಗಳ ಯಕ್ಷಗಾನದ ಬಗ್ಗೆ ಸೇವಾಕರ್ತಕರಲ್ಲಿನ ಭಕ್ತಿ-ಭಾವುಕತೆಯನ್ನು ಸೂಚಿಸುತ್ತದೆ.