ಬೆಂಗಳೂರು: ಬೆಳ್ಳಂಬೆಳಿಗ್ಗೆ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ.
ಯಲಹಂಕದ ಲಾಲ್ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಡಿದ ತೀವ್ರತೆಗೆ ಐದು ಮನೆಗಳು ಡ್ಯಾಮೇಜ್ ಆಗಿವೆ. ಸಿಲಿಂಡರ್ ಸ್ಫೋಟಗೊಂಡ ಮನೆಯ ಇಟ್ಟಿಗೆ ಗೋಡೆಗಳೇ ಕುಸಿದುಬಿದ್ದಿವೆ. ಸ್ಫೋಟದ ತೀವ್ರತೆಗೆ ಲಾಲ್ಬಹದ್ದೂರ್ ಶಾಸ್ತ್ರಿ ನಗರದ ಜನತೆ ಬೆಚ್ಚಿಬಿದ್ದರು. ಅಕ್ಕ ಪಕ್ಕದ ಮೂರು ಮನೆಗಳಿಗೆ ಡ್ಯಾಮೇಜ್ ಆಗಿದೆ. ಪಸೀಯಾ ಬಾನು (50), ಸಲ್ಮಾ (22), ಶಾಹಿದ್ (16), ಅಸ್ಮಾ (50) ಅಫ್ರೋಜ್ (23) ಘಟನೆಯಲ್ಲಿ ಗಾಯಗೊಂಡವರು.
ಸ್ಫೋಟದ ಪರಿಣಾಮ ಒಂದೇ ಕುಟುಂಬದ ಆರು ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.