Join The Telegram | Join The WhatsApp |
ವೆಲ್ಲಿಂಗ್ಟನ್ : ಧೂಮಪಾನದ ಮೇಲೆ ಸಂಪೂರ್ಣ ನಿಷೇಧವನ್ನು ಮುಂದಿನ ವರ್ಷದಿಂದ ಹಂತಹಂತವಾಗಿ ಜಾರಿಗೆ ತರಲು ನ್ಯೂಝಿಲ್ಯಾಂಡ್ ನಿರ್ಧರಿಸಿದೆ. ಮೊದಲ ಹಂತದಲ್ಲಿ 2008ನೇ ಇಸವಿಯ ಆನಂತರ ಜನಿಸಿದವರೆಲ್ಲರಿಗೂ ಸಿಗರೇಟುಗಳನ್ನು ಖರೀದಿಸುವುದಕ್ಕೆ ನಿಷೇಧ ಹೇರಲಾಗುವುದು.
ಇದೇ ವೇಳೆ ದೇಶದಲ್ಲಿ ತಂಬಾಕು ಉತ್ಪನ್ನಗಳಲ್ಲಿ ನಿಕೋಟಿನ್‌ನ ಪ್ರಮಾಣವನ್ನು ಕಡಿಮೆಗೊಳಿಸಲು ಕೂಡಾ ಅದು ಯೋಜನೆ ರೂಪಿಸಿದೆ.
ನ್ಯೂಝಿಲ್ಯಾಂಡ್ ಸಂಸತ್‌ನಲ್ಲಿ ಮಂಗಳವಾರ ಈ ಕುರಿತು ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ಇದರಿಂದಾಗಿ ಇನ್ನು ಮುಂದೆ ಆ ದೇಶದಲ್ಲಿ 14 ವರ್ಷಕ್ಕಿಂತ ಕೆಳವಯಸ್ಸಿನವರೆಲ್ಲರೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳನ್ನು ಖರೀದಿಸುವುದು ಕಾನೂನುಬಾಹಿರವಾಗಲಿದೆ.
ಈ ಮಸೂದೆಯು ಧೂಮಪಾನ ಸೇವನೆಗೆ ಇರುವ ಕನಿಷ್ಠ ವಯೋಮಿತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಹೋಗುತ್ತದೆ. ಆ ಮೂಲಕ ದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವ ವ್ಯಕ್ತಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.
”ನೂತನ ಮಸೂದೆಯು ಧೂಮಪಾನ ಮುಕ್ತ ಭವಿಷ್ಯದೆಡೆಗೆ ಒಂದು ಹೆಜ್ಜೆಯಾಗಿದೆ” ಎಂದು ಈ ಶಾಸನದ ಹಿಂದಿರುವ ಚಾಲಕಶಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಸಂಪುಟ ಸಚಿವೆ ಆಯೇಶಾ ವೆರ್ರಾಲ್ ತಿಳಿಸಿದ್ದಾರೆ.
ನೂತನ ಮಸೂದೆಯ ಜಾರಿಯಿಂದಾಗಿ ಸಾವಿರಾರು ವ್ಯಕ್ತಿಗಳು ಸುದೀರ್ಘ, ಆರೋಗ್ಯಕರ ಬದುಕನ್ನು ಸಾಗಿಸಲಿದ್ದಾರೆ ಹಾಗೂ ಇದರಿಂದಾಗಿ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವ್ವವಾಯು, ಆಂಗವೈಕಲ್ಯ ಮತ್ತಿತರ ಅನಾರೋಗ್ಯಗಳಿಗೆ ವ್ಯಯಿಸುವ ವೆಚ್ಚವು ಕಡಿಮೆಯಾಗಿ ಆರೋಗ್ಯಪಾಲನಾ ವ್ಯವಸ್ಥೆಗೆ 3.2 ಶತಕೋಟಿ ಡಾಲರ್ ಉಳಿತಾಯವಾಗಲಿದೆ” ಎಂದು ಆಯೆಶಾ ವೆರ್ರಾಲ್ ತಿಳಿಸಿದ್ದಾರೆ.
ನ್ಯೂಝಿಲ್ಯಾಂಡ್‌ನಲ್ಲಿ ಒಟ್ಟು ಜನಸಂಖ್ಯೆಯ ಕೇವಲ 8 ಶೇಕಡ ಮಂದಿ ಮಾತ್ರವೇ ಧೂಮಪಾನಿಗಳೆಂದು ಅಂದಾಜಿಸಲಾಗಿದೆ. ಆದಾಗ್ಯೂ ನ್ಯೂಝಿಲ್ಯಾಂಡ್ ಸರಕಾರ ಮಂಗಳವಾರ ಅಂಗೀಕರಿಸಿರುವ ಧೂಮಪಾನ ಮುಕ್ತ ಪರಿಸರ ಮಸೂದೆಯು, 2025ರೊಳಗೆ ದೇಶದಲ್ಲಿನ ಧೂಮಪಾನಿಗಳ ಸಂಖ್ಯೆಯನ್ನು ಶೇ.5ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
Join The Telegram | Join The WhatsApp |