ಬೆಳಗಾವಿ : ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವಯೋವೃದ್ಧರೊಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ಘಟನೆ ಬೆಳಕಿಗೆ ಬಂದಿದೆ.

ಬುಧವಾರ ರಾತ್ರಿ ಸುಮಾರು 9:00 ಗಂಟೆ ಸುಮಾರಿಗೆ ಖಾನಾಪುರ ಮುನ್ಸಿಪಲ್ ಕಾರ್ಪೊರೇಷನ್ ಬಳಿಯ ಜಾಕ್ ವೆಲ್ ಸನಿಹ ಸೇತುವೆಯ ಮೇಲಿನ ಸ್ಟೆಪ್ ನಿಂದ ಮಲಪ್ರಭಾ ನದಿಗೆ ಜಿಗಿಯಲು ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ ಶೇಡಗಾಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜು ಗುರವ, ರುಮೇವಾಡಿಯ ಪ್ರಭಾಕರ ಸುತಾರ, ಕರಂಬಳದ ಮಾರುತಿ ಪಾಟೀಲ ಅವರು ವಯೋವೃದ್ದರನ್ನು ರಕ್ಷಿಸಿ ಕೊನೆಗೂ ಪೊಲೀಸರ ವಶಕ್ಕೆ ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂದು ವಯೋವೃದ್ದರನ್ನು ಕೇಳಿದ್ದಾರೆ. ಆಗ ಆ ವ್ಯಕ್ತಿ ತಾನು ಮಾಸ್ತಮರಡಿ(ದೇವಗಿರಿ) ನಿವಾಸಿಯಾಗಿದ್ದು ನನಗೆ ಇಬ್ಬರು ಪುತ್ರರು, ಮೂವರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಈಗ ನಾನು ಇಬ್ಬರು ಮಕ್ಕಳ ಜೊತೆ ಇದ್ದೇನೆ. ಆದರೆ, ಮಕ್ಕಳಿಬ್ಬರು ನನ್ನ ಯೋಗ ಕ್ಷೇಮ ನೋಡುವುದಿಲ್ಲ, ಮಕ್ಕಳಿಂದ ನನಗೆ ಕಿರುಕುಳವಾಗುತ್ತಿದೆ. ಇದರಿಂದ ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಹೇಳಿದರು. ಕೊನೆಗೆ ಖಾನಾಪುರ ಪೊಲೀಸರು ಅವರಿಗೆ ಊಟದ ವ್ಯವಸ್ಥೆ ಮಾಡಿ ಅವರ ಮಕ್ಕಳನ್ನು ಸಂಪರ್ಕಿಸಿದ್ದಾರೆ. ಮಕ್ಕಳಿಬ್ಬರು ಖಾನಾಪುರಕ್ಕೆ ಬಂದ ನಂತರ ಅವರಿಗೆ ತಂದೆಯನ್ನು ಒಪ್ಪಿಸಿ, ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲು ಎಚ್ಚರಿಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದರು.