ಬೆಳಗಾವಿ : ಖಾನಾಪುರ ತಾಲೂಕು ಲಿಂಗನಮಠ ಬಳಿ ಗುರುವಾರ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಗೆ ಇಳಿದಿದೆ. ಇದರಿಂದ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಇದ್ದರು. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಗೆ ಹೋಗಿದೆ. ಇದರಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳು ಒಂದೇ ಸಮನೆ ಕೂಗಲು ಪ್ರಯತ್ನಿಸಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಇದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಗೆ ಇಳಿದಿದೆ ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ.

ಖಾನಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಿಂಗನಮಠ ಶಾಲೆಯ ವಿದ್ಯಾರ್ಥಿನಿಯರು ಬಸ್ಸಿನಲ್ಲಿ ತೆರಳಿದ್ದರು. ಕಾರ್ಯಕ್ರಮ ರದ್ದುಗೊಂಡಿದ್ದರಿಂದ ಅವರು ತಮ್ಮ ಊರಿಗೆ ಈ ಬಸ್ ಮೂಲಕ ತೆರಳುವಾಗ ಗ್ಯಾಸ್ಟೋಳಿ-ಶಿವಾಜಿನಗರ ಬಳಿ ಅವಘಡ ಸಂಭವಿಸಿದೆ. ಬಸ್ ರಸ್ತೆ ಬದಿ ಹೋಗುತ್ತಲೇ ಅಪಾಯ ಅರಿತ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದಾರೆ. ಅಷ್ಟರಲ್ಲಿ ನಾಗರಿಕರು ಸೇರಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.