ಬೆಂಗಳೂರು : ಮಾಜಿ ಶಾಸಕಿ ಸೌಮ್ಯ ರೆಡ್ಡಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 2 ವಾರಗಳ ಹಿಂದೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸಂದರ್ಶನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸೌಮ್ಯ ರೆಡ್ಡಿ ಅವರನ್ನು ಕೆಪಿಸಿಸಿ ಮಹಿಳಾ ಅಧ್ಯಕ್ಷೆಯಾಗಿ ಅವಕಾಶ ಮಾಡಿಕೊಟ್ಟಿದೆ. ಮಾಜಿ ಶಾಸಕಿ ಸೌಮ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಪರಾಜಿತರಾಗಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಅತ್ಯಂತ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ರಾಜ್ಯದ ಪ್ರಭಾವಿ ಸಚಿವ ರಾಮಲಿಂಗ ರೆಡ್ಡಿ ಅವರ ಸುಪುತ್ರಿಯಾಗಿರುವ ಸೌಮ್ಯ ರೆಡ್ಡಿ ಅವರಿಗೆ ಈಗ 41 ವರ್ಷ. ಉತ್ಸಾಹಿ ಹಾಗೂ ಸಂಘಟನೆಗೆ ಹೆಸರುವಾಸಿಯಾಗಿರುವ ಸೌಮ್ಯ ರೆಡ್ಡಿ ರಾಜ್ಯದೆಲ್ಲೆಡೆ ಸುತ್ತಾಡಿ ಪಕ್ಷವನ್ನು ಬಲಯುತವಾಗಿ ಕಟ್ಟುವರೆಂಬ ವಿಶ್ವಾಸದ ಮೇಲೆ ಇದೀಗ ಪಕ್ಷ ಮಹತ್ವದ ಹೊಣೆಗಾರಿಕೆಯನ್ನು ನೀಡಿದೆ.
ತಂದೆಯಂತೆಯೇ ಮಗಳು : ಜಯನಗರ ಮಾಜಿ ಶಾಸಕಿ ಸೌಮ್ಯ ರೆಡ್ಡಿ ವ್ಯಕ್ತಿ ಪರಿಚಯ ಹೀಗಿದೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಸೌಮ್ಯ ರೆಡ್ಡಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ವಿದ್ಯಾವಂತ ರಾಜಕಾರಣಿಯಾಗಿರುವ ಇವರು ರಾಜಕೀಯ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಜಯನಗರದ ಮಾಜಿ ಶಾಸಕಿಯಾಗಿರುವ ಇವರು ಈಗಾಗಲೇ ತಮ್ಮ ಅಭಿವೃದ್ಧಿ ಕೆಲಸ ಹಾಗೂ ಹೋರಾಟಗಳಿಂದ ಜನ ಮನ್ನಣೆ ಗಳಿಸಿದ್ದಾರೆ.
ತಂದೆ ರಾಮಲಿಂಗ ರೆಡ್ಡಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾರಣ ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಬೆಂಗಳೂರಿನ ಆರ್‌ವಿ ಇಂಜಿನಿರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ ಬಳಿಕ ಸೌಮ್ಯ ರೆಡ್ಡಿ ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಮುಗಿಸಿದರು. ಅವರು ಮೊದಲಿನಿಂದಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗಿಯುತ್ತಿದ್ದರು. ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದ್ದಾರೆ.
2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಸೌಮ್ಯ ರೆಡ್ಡಿ ಅವರು, ಬಳಿಕ ರಾಜಕೀಯದತ್ತ ಒಲವು ತೋರಿದರು. ತಂದೆಯ ಮಾರ್ಗವನ್ನೇ ಹಿಡಿದ ಸೌಮ್ಯ ರೆಡ್ಡಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ, ಪಕ್ಷದ ಸದಸ್ಯರಾದರು. ಬಳಿಕ 2016ರಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು.
ಕಾಂಗ್ರೆಸ್‌ನಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅವರು ವಿಧಾನಸಭೆ ಪ್ರವೇಶಿಸಲು ಜಯನಗರ ವಿಧಾಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದರು. 2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದ ಪುತ್ರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಿದ್ದರು. ಜೊತೆಗೆ ಇತರ ಕಾಂಗ್ರೆಸ್ ನಾಯಕರು ಸಹಾ ಸಾಥ್ ನೀಡಿದ್ದರು.
ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿದ್ದ ಕಾಂಗ್ರೆಸ್ ಧುರೀಣೆ ಸೌಮ್ಯ ರೆಡ್ಡಿ ಅವರು ಬಿಜೆಪಿಯ ಬಿ.ಎನ್ ಪ್ರಹ್ಲಾದ್ ಬಾಬು ಅವರನ್ನು 2,889 ಮತಗಳ ಅಂತರದಿಂದ ಸೋಲಿಸಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾದರು. ಶಾಸಕಿಯಾದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸತತ ಶ್ರಮವಹಿಸಿದ್ದರು. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧದ ಹಲವು ಬೃಹತ್ ಹೋರಾಟಗಳಲ್ಲಿ ಸೌಮ್ಯ ರೆಡ್ಡಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು.
ಶಾಸಕಿಯ ಕರ್ತವ್ಯದ ಜೊತೆಗೆ ಇವರು ಪರಿಸರವಾದಿಯಾಗಿದ್ದು, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ನಗರದಲ್ಲಿ ಹಸಿರನ್ನು ಹೆಚ್ಚಿಸಲು ಯುವ ಜನತೆ ಸೇರಿದಂತೆ ಬೆಂಗಳೂರಿನ ನಿವಾಸಿಗಳಿಗೆ ಗಿಡಗಳನ್ನು ಬೆಳೆಸಲು ಉತ್ತೇಜಿಸುತ್ತಿದ್ದಾರೆ. ಇನ್ನು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸೌಮ್ಯರೆಡ್ಡಿ ಶಾಸಕಿಯಾಗಿ ತಮ್ಮ ಕರ್ತವ್ಯವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಫುಡ್ ಕಿಟ್ ನೀಡುವುದರ ಜೊತೆಗೆ ವೈದ್ಯಕೀಯ ಸೌಲಭ್ಯಕ್ಕೂ ನೆರವಾಗಿದ್ದಾರೆ.
ಸೌಮ್ಯಾ ರೆಡ್ಡಿ ಅವರು ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ. 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಸದ್ಯ ಪುಷ್ಪಾ ಅಮರನಾಥ್ ಅವರು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು.
ಪುಷ್ಪಾ ಅಮರನಾಥ್ ಅವರ ಬದಲಿಗೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಸೌಮ್ಯಾ ರೆಡ್ಡಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಅನ್ನೋ ಒತ್ತಾಯ ಮಾಡಿದ್ದರು. ಇದೀಗ ಸೌಮ್ಯಾ ರೆಡ್ಡಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದ್ದು, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ದೆಹಲಿಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿಕೆ ರಾಮಮೂರ್ತಿ ವಿರುದ್ಧ ಕೇವಲ 16 ಮತಗಳಿಂದ ಸೋತಿದ್ದರು.