ಬೇಸಿಗೆಯ ಪರ್ವ ಮುಗಿದು ಮಳೆಗಾಲದ ಆರಂಭ ಮಲೆನಾಡಿನಲ್ಲಿ ಹುಳಿಮಾವಿನ ಹಣ್ಣಿನ ಶುಕ್ರದೆಸೆ. ಆದರೆ ಈ ವರ್ಷ ಬಹುತೇಕ ಅಪರೂಪವೇ ಸರಿ ಎಲ್ಲೆಂದರಲ್ಲಿ ತಾನೇ ತಾನಾಗಿ ಹುಲುಸಾಗಿ ಬೆಳೆದು ಮಲೆನಾಡಿನ‌ ಸಕಲ ಜೀವಿಗಳಿಗೂ ಯಾವುದೇ ಫಲಾಫಲಾಪೇಕ್ಷೆ ಇಲ್ಲದೆ ತನ್ನ ಸವಿಯನ್ನು ನೀಡುವ ‘ದೈವದತ್ತ’ ಹಣ್ಣು. ಕಾರಣ ಯಾವುದೇ ಔಷಧವೋ, ಗೊಬ್ಬರವೋ, ನಿರ್ವಹಣೆಯೋ ಯಾವುದೂ ಇಲ್ಲದೇ ತಾನಾಗಿಯೇ ತಾನಾಗಿಯೇ ಸಿಗುವ ಹಣ್ಣು.

ಕೆಲವು ಸ್ವಲ್ಪ ಹುಳಿ ಕೆಲವು ಸ್ವಲ್ಪ ಸಿಹಿ, ಉಳಿದಂತೆ ವಿಪರೀತ ಹುಳಿ ಸಿಹಿ ಇರುವ ಹಣ್ಣು ಸಹಜ. ಸಂಪೂರ್ಣ ಹಸಿರು, ಪೂರ್ಣ ಹಳದಿ, ಇಲ್ಲವೇ ಕೇಸರಿ ಇಲ್ಲವೇ ಕೆಂಪು ವರ್ಣವು ಅವುಗಳ ಬೆಳವಣಿಗೆಯ ಸಹಜ ಲಕ್ಷಣ. ಜೀರಿಗೆ ಕಂಪಿನ ಮಾವು ವಿಶೇಷ ತಳಿಯೇ ಸರಿ.ಕೆಲವೊಂದಕ್ಕೆ ಒಳಗಿನ ವಾಟೆಯೇ ಬಲವಾಗಿದ್ದರೆ ಇನ್ನು ಕೆಲವು ನಾಮಮಾತ್ರಕ್ಕೆ ವಾಟೆ ಇರುವ ಸಣ್ಣ ತಳಿಯೂ ಇವೆ.
ಈಗೇನಿದ್ದರೂ ಅವುಗಳ ಹುಳಿ, ಸಾಸಿವೆ, ಗೊಜ್ಜು, ಬೆಲ್ಲದಣ್ಣು, ಒಗ್ಗರಣೆ ಪಲ್ಯೆ, ಮುಂತಾದ ತರಹೆವಾರು ಮಲೆನಾಡ ಪದಾರ್ಥವಾಗಿ ಬಾಯಿ ಚಪಲವನ್ನು ತಣಿಸುತ್ತವೆ. ಮಲೆನಾಡು ಬೆಲ್ಲ, ಜೀರಿಗೆ ಮೆಣಸು, ಕರಿಮೆಣಸು ಇವುಗಳಿಗೆ ಬಹು ಬೇಡಿಕೆಯ ಕಾಂಬಿನೇಶನ್.

ಸಹಜವಾಗಿಯೇ ಊಟದ ಒಂದು ತುತ್ತು ತುಸು ಹೆಚ್ಚಾಗಿ ಉದರಕ್ಕಿಳಿಯಲಿದೆ. ಇಂದು ನಮ್ಮ ಶ್ರೀಮತಿ ಹಾಗು ನಮ್ಮ ಅಮ್ಮನ ಸುಮಧುರ ಸಂಯೋಜನೆಯಲ್ಲಿ ಹಲವು ಪದಾರ್ಥಗಳು ನಮ್ಮನೆಯನ್ನು ಘಮಾಘಮ್ ಎನಿಸಿದ್ದವು. ಈ ವರ್ಷದ ಮೊದಲ ಹುಳಿಮಾವಿನ ಪದಾರ್ಥ ಬಾಯಿ ಚಪಲವನ್ನು ತಣ್ಣಗಾಗಿಸಿತು.

ಮಾವು ಎಲ್ಲರಿಗೂ ಬಹು ಇಷ್ಟ :
ಸುಮಾರು 4000 ವರ್ಷಗಳಿಂದಲೂ ಭಾರತದಲ್ಲಿ ಮಾವಿನ ಬೇಸಾಯ ಇದೆ ಎನ್ನಲಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾವು ಅಸ್ಸಾಮ್-ಬರ್ಮ-ಥಾಯ್ಲೆಂಡ್ ವಲಯದಲ್ಲಿ ಉಗಮಿಸಿತು. ಈ ದೇಶಗಳ ಕಾಡುಗಳಲ್ಲಿ ಇಂದು ಜನಪ್ರಿಯವಾಗಿರುವ ಇಂಡಿಕ ಪ್ರಭೇದದ ಹಾಗೂ ಸಿಲ್ವೇಟಿಕ ಪ್ರಭೇದದ ಕಾಡು ಪ್ರರೂಪಗಳು ಕಾಣದೊರೆಯುತ್ತಿದ್ದು ಮಾವು ಇವೆರಡು ಪ್ರಭೇದಗಳ ನಡುವೆ ಸಂಭವಿಸಿತೆನ್ನಲಾದ ಸಹಜ ಸಂಕರದಿಂದ ಹುಟ್ಟಿದ್ದು ಎಂಬ ಅಭಿಪ್ರಾಯ ಇದೆ.

ಕರ್ನಾಟಕದಲ್ಲಿ ಮಾವಿನ ಹಣ್ಣು:
ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಬರುವುದು.
ಕರ್ನಾಟಕದ ಮಾವಿನ ಹಣ್ಣುಗಳು ಪುಣೆಗೆ ಹೋಗಿ ಅಲ್ಲಿಂದ ವಿದೇಶಗಳಿಗೆ ರಫ್ತಾಗುತ್ತವೆ. ಕರ್ನಾಟಕದ ಆಲ್ಫಾನ್ಸೋ ಹಣ್ಣುಗಳು ಮಹಾರಾಷ್ಟ್ರ ಸೇರಿ ಅಲ್ಲಿಂದ ರತ್ನಗಿರಿ (ಬ್ರ್ಯಾಂಡ್ ನೇಮ್) ಹೆಸರಿನಲ್ಲಿ ಹೊರದೇಶಕ್ಕೆ ಹೋಗುತ್ತವೆ. ಆದ್ದರಿಂದ ಕರ್ನಾಟಕದಿಂದ ಎಷ್ಟು ರಫ್ತಾಗುವುದೆನ್ನುವ ಲೆಕ್ಕ ಸಿಗುವುದಿಲ್ಲ.ಮಹಾರಾಷ್ಟ್ರದಲ್ಲಿ ಬೆಳೆಯುವ ರತ್ನಗಿರಿ ಹಣ್ಣಿಗಿಂತ ಕರ್ನಾಟಕದ ಆಲ್ಫಾನ್ಸೋ ಹೆಚ್ಚು ರುಚಿಯುಳ್ಳದ್ದು ಆದರೆ ಅದರ ಹೆಸರು ವಿದೇಶದಲ್ಲಿ ಇಲ್ಲ.
ಕಾರಣ ಅದು ಮಹಾರಾಷ್ಟ್ರದ ರತ್ನಗಿರಿ ಹೆಸರಿನಲ್ಲಿ ಮಾರಾಟವಾಗುವುದು ಮತ್ತು ರಫ್ತಾಗುವುದು. ಈಗ ಕರ್ನಾಟಕದಲ್ಲಿ ಮಾವಿನ ಹಣ್ಣಿನ ರಕ್ಷಣೆಗಾಗಿ ತಂಪು ಉಗ್ರಾಣಗಳು ತಯಾರಾಗುತ್ತಿವೆ. ಅದಾದ ನಂತರ ರಫ್ತಿಗೂ ಅನುಕೂಲವಾಗಿ ಉತ್ತಮ ಬೆಲೆ ರೈತರಿಗೆ ಸಿಗಬಹುದು.

 

✒️ಲೋಕರಾಜ ಜೈನ್
ಸಾಳ್ವಕುಲಜ ನಗಿರೆಸುತ