ಶಿರಸಿ : ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಅತಿದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಮಾರ್ಚ್‌ 19ರಂದು ಜಾತ್ರಾ ಮಹೋತ್ಸವ ಆರಂಭವಾಗಿದೆ. ರಥಕ್ಕೆ ಕಲಶ ಪ್ರತಿಷ್ಠೆ ಮಾರ್ಚ್‌ 19 ರಂದು ಮಧ್ಯಾಹ್ನ 12:27ಕ್ಕೆ ನಡೆದಿದ್ದು, ರಾತ್ರಿ 11:39ರಿಂದ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ.

ಬಣ್ಣ ಹಾಗೂ ಕಾವಿಯ ಕಲೆಯ ಸಾಂಪ್ರದಾಯಿಕ ಚಿತ್ರಗಳಿಂದ ಕಂಗೊಳಿಸುತ್ತಿರುವ ದೇವಸ್ಥಾನದ ಸಭಾ ಮಂಟಪದಲ್ಲಿ ಶ್ರೀ ಮಾರಿಕಾಂಬಾ ದೇವಿಯನ್ನು ಅಚ್ಚುಕಟ್ಟಾಗಿ ಮೂರೂವರೆ ಶತಮಾನಗಳಿಂದ ನಡೆದುಬಂದ ಆಚರಣೆ ಪದ್ಧತಿಯಂತೆ ಗ್ರಾಮದೇವಿಯರಾದ ಮಾರಿಕಾಂಬೆಯ ಸಹೋದರಿಯರೆಂದು ಕರೆಯಲಾಗುವ ಶ್ರೀ ಮರ್ಕಿ-ಶ್ರೀದುರ್ಗಿಯರ ಜೊತೆ ಜಾತ್ರಾ ಕಲ್ಯಾಣ ಪ್ರತಿಷ್ಠೆಗಾಗಿ ಸಿದ್ಧಗೊಳಿಸಿದ್ದಾರೆ. ಮಂಗಳವಾರ ಮಾರ್ಚ್‌ 19 ರಂದು ಮಧ್ಯರಾತ್ರಿಯ ಹೊತ್ತಿಗಿನ ನಿಗದಿತ ಮುಹೂರ್ತದಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳ ಪಾಲ್ಗೊಳ್ಳುವಿಕೆಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರಾ ಮಂಟಪದಲ್ಲಿ ಶ್ರೀದೇವಿಯ ಸಿಹಿ ಪ್ರಸಾದ, ಕುಂಕುಮ ಪ್ರಸಾದದ ತಯಾರಿಯೂ ಭರದಿಂದ ಸಾಗಿದೆ. ಅಲ್ಲದೆ, ನಗರದ ಹೃದಯ ಭಾಗದಲ್ಲಿರುವ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ದರ್ಶನಕ್ಕೆ ಸಾಗಲು ಭಕ್ತರಿಗೆ ಸರತಿ ಸಾಲಿಗಾಗಿ ಕಬ್ಬಿಣದ ಗ್ರಿಲ್‌ಗಳು, ಹಣ್ಣು ಕಾಯಿ ಸೇವೆಗಾಗಿ ವಿಶಾಲ ಜಾಗದಲ್ಲಿ ಹಣ್ಣು ಕಾಯಿ ಒಡೆಯುವ ಸೌಲಭ್ಯ, ಉಡಿ, ಸೀರೆ ಸೇವೆ ಹಾಗೂ ಇತರ ಸೇವೆಗಳಿಗಾಗಿ ಸೇವಾ ಕೌಂಟರ್‌ಗಳು, ಜಾತ್ರಾ ಮಂಟಪದಲ್ಲಿ ಆಡಳಿತ ಮಂಡಳಿಯ ಕಾರ್ಯಾಲಯ, ಸುರಕ್ಷತೆಗಾಗಿ ಪೋಲೀಸ್ ಚೌಕಿಗಳನ್ನು ನಿರ್ಮಿಸಿದ್ದು, ಜಾತ್ರಾ ಚಪ್ಪರದಲ್ಲಿ ಶ್ರೀದೇವಿಯ ಪ್ರತಿಷ್ಠೆಯ ಪೂರ್ವದ ಅಂತಿಮ ಹಂತದ ನಿರ್ಮಾಣಗಳು ನಡೆದಿದೆ.

ಮಾ.20ರಂದು ಬೆಳಗ್ಗೆ ದೇವಿಯ ಅದ್ಧೂರಿ ರಥೋತ್ಸವ ನಡೆಯಲಿದೆ, ನಂತರ ಜಾತ್ರಾ ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ನಡೆಯಲಿದೆ. ಅಂದು ಬೆಳಗ್ಗೆ 7.27ರಿಂದ 7.39 ಗಂಟೆಯೊಳಗೆ ದೇವಿಯ ರಥಾರೋಹಣ ನಡೆಯಲಿದ್ದು, 8.59 ಗಂಟೆಯಿಂದ ಶೋಭಾಯಾತ್ರೆ ನಡೆಯಲಿದೆ. ನಂತರ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಮಾರ್ಚ್‌ 21 ರಂದು ಬೆಳಗ್ಗೆ 5 ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ ಆರಂಭವಾಗಲಿದೆ. 27ರಂದು ಬೆಳಗ್ಗೆ 10:15ಕ್ಕೆ ಸೇವೆ ಮುಗಿಯಲಿದೆ. ಹಾಗೂ 10:41ಕ್ಕೆ ಜಾತ್ರೆ ಮುಗಿಯಲಿದೆ. ಏ.9ರಂದು ಬೆಳಗ್ಗೆ 7.51ರಿಂದ 8.03 ಯುಗಾದಿಗೆ ದೇವಾಲಯದಲ್ಲಿ ದೇವಿಯ ಪುನರ್‌ ಪ್ರತಿಷ್ಠೆ ಆಗಲಿದೆ.

ಒಟ್ಟು ಎಂಟು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರಲಿದ್ದು, ಇದೇ ವೇಳೆ ಹರಕೆ ಸೇವೆ ಸಲ್ಲಿಸಲಾಗುತ್ತದೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ಜಾತ್ರಾ ಗದ್ದುಗೆಯಲ್ಲಿ ದರ್ಶನಕ್ಕೆ, ಹರಕೆ ಪೂಜೆ ಸಲ್ಲಿಕೆಗೆ ಕಾತರರಾಗಿದ್ದರೆ. ಅದಕ್ಕಾಗಿ ಶ್ರೀದೇವಿಯ ಭಕ್ತರಿಗೆ ಸೇವೆ ಸಲ್ಲಿಸಲು, ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ಶ್ರೀದೇವಸ್ಥಾನದ ಆಡಳಿತ ಮಂಡಳಿ, ಬಾಬದಾರರ ಕುಟುಂಬಗಳು ಹಾಗೂ ತಾಲೂಕಾ ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ.