ಬೆಳಗಾವಿ : ರವಿವಾರದಂದು ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಆರ್. ಎಲ್. ಎಸ್.ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಶಶಿಕಾಂತ ತಾರದಾಳೆ ‘ ‘ಮಾನವ ಧರ್ಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಕಷ್ಟದಲ್ಲಿ ಇರುವವರಿಗೆ ಸಹಾಯ, ಶೋಷಿತರಿಗೆ ನಿರ್ಗತಿಕರಿಗೆ, ಬಡವರಿಗೆ ನಮ್ಮ ಕೈಲಾದ ಸೇವೆ ಮಾಡುವುದೇ ಧರ್ಮ. ನಮ್ಮ ನಮ್ಮಲ್ಲಿ ಒಡೆದು ಆಳುವುದು, ಆಸ್ತಿ ಅಂತಸ್ತು ಬರಲಿ ಎಂಬ ಹಪಾಹಪಿ ನಮ್ಮ ಧರ್ಮವಲ್ಲ . ನಮ್ಮಲ್ಲಿರುವ ಒಳ್ಳೆಯತನವನ್ನು ಬೀರುವುದೇ ಧರ್ಮ. ಜೀವನ ಮಾದರಿಯಾಗಲಿ, ಎಲ್ಲರಿಗೂ ಅನುಕರಣೀಯವಾಗಲಿ, ಆ ನಿಟ್ಟಿನಲ್ಲಿ ನಾವೆಲ್ಲ ವ್ಯಸನಮುಕ್ತ ಸಮಾಜವನ್ನು ಕಟ್ಟುವುದೇ ನಮ್ಮ ಧರ್ಮವಾಗಿದೆ. ಸಮಯ ಪ್ರಜ್ಞೆ,ಸಂಸ್ಕಾರ, ನಮ್ಮತನ ಮನೋಭಾವನೆ ಇರಬೇಕು. ಹೃದಯವಂತಿಕೆ ಮತ್ತು ಹಂಚಿಕೊಳ್ಳುವ ಭಾವದಿಂದ ಎಲ್ಲರೂ ಬದುಕೋಣ.ಆ ನಿಟ್ಟಿನಲ್ಲಿ ಮಾನವರಾಗಿ ಹುಟ್ಟಿರುವ ನಾವು ನಿಜವಾದ ಧರ್ಮವನ್ನು ಪಾಲಿಸೋಣ ಎಂದು ಮಾನವ ಧರ್ಮದ ಕುರಿತಾದ ಅನೇಕ ಭಾವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಲಿಂಗಾಯತ ಸಂಘಟನೆಯ ಸುರೇಶ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಪಿರಮಿಡ್ ಮೆಡಿಟೇಷನ್ ಸೆಂಟರ್ ಮುಖ್ಯಸ್ಥೆ ಸರೋಜಾ ಮಲ್ಲಿಕಾರ್ಜುನ ಧ್ಯಾನದ ಮಹತ್ವವನ್ನು ವಿವರಿಸುತ್ತಾ ಧ್ಯಾನದಿಂದ ರೋಗ ಮುಕ್ತಿ ಪಡೆಯಬಹುದು. ಧ್ಯಾನ ಎಂದರೆ ನಾವು ಧ್ಯಾನದ ಸ್ಥಿತಿಗೆ ಬರುವುದೇ ಧ್ಯಾನ ಎಂದು ಹೇಳುತ್ತಾ ಧ್ಯಾನದಿಂದ ಅಪಾರ ಸಾಧನೆ ಸಾಧ್ಯ. ಆ ನಿಟ್ಟಿನಲ್ಲಿ ಧ್ಯಾನದ ಮಹತ್ವ ಅರಿತು ನಾವೆಲ್ಲ ಧ್ಯಾನದ ಶಕ್ತಿಯಿಂದ ಎಲ್ಲವನ್ನು ಗೆಲ್ಲೋಣ ಎಂದರು. ಸ್ವಾತಂತ್ರೋತ್ಸವದ ಶುಭವಾರದ ನಿಮಿತ್ತ ಬಸಮ್ಮ ವಸ್ತ್ರದ ‘ ಮೇರೆ ವತನ್ ಕೆ ಲೋಗೋ’ ದೇಶಭಕ್ತಿ ಗೀತೆ ಹಾಡಿ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದರು.

ವಿ.ಕೆ.ಪಾಟೀಲ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಬಾಳ ಗೌಡ ದೊಡ್ಡಭಂಗಿ,ಸುನಿಲ ಸಾಣಿಕೊಪ್ಪ, ಬಾಬು ತಿಗಡಿ,ಶಿವಾನಂದ ನಾಯಕ, ವಿ. ಎಂ. ಬೇವಿನಕೊಪ್ಪಮಠ,ಸುವರ್ಣ ತಿಗಡಿ,ಸುವರ್ಣಾ ಗುಡಸ,ಜಯಕ್ಕಾ,ಬಿ.ಪಿ.ಜೇವಣಿ, ಶಿವಾನಂದ ತಲ್ಲೂರ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಬಾಳಪ್ಪ ಕಾಡಣ್ಣವರ ಪ್ರಸಾದ ಸೇವೆ ಮಾಡಿದರು. ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿ ಕೊಟ್ಟರು. ವಿ. ಕೆ. ಪಾಟೀಲ ಸ್ವಾಗತಿಸಿದರು. ಎಂ.ವೈ. ಮೆಣಸಿನಕಾಯಿ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.