ಬೆಂಗಳೂರು : ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 30ರಂದು ಬೆಂಗಳೂರು- ಕಾರವಾರ ವಿಶೇಷ ರೈಲು ಸಂಚಾರವನ್ನು ಘೋಷಣೆ ಮಾಡಿದ್ದ ರೈಲ್ವೆ ಇದೀಗ ನವೆಂಬರ್ 3 ರಂದು ಇನ್ನೊಂದು ವಿಶೇಷ ರೈಲು ಬಿಡಲಿದೆ. ನವೆಂಬರ್ 3 ರಂದು ಕಾರವಾರದಿಂದ ರೈಲು ಮಧ್ಯಾಹ್ನ 12ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ತಲುಪಲಿದೆ. ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮುಕಾಂಬಿಕಾ ರೋಡ್, ಭಟ್ಕಳ, ಮುರುಡೇಶ್ವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ಸ್ಟೇಷನ್ ನಲ್ಲಿ ಇದು ನಿಲುಗಡೆ ಇರಲಿದೆ. ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ನವೆಂಬರ್‌ 4 ರ ಬೆಳಗ್ಗೆ 6ಕ್ಕೆ ಮತ್ತೊಂದು ರೈಲು ಮಡಗಾಂವವರೆಗೆ ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.