ಹೆಬ್ರಿ : ವ್ಯಕ್ತಿಗಳಲ್ಲಿ ಮಾತೇ ಸಾಧನೆ ಆಗಬಾರದು ಸಾಧನೆಯೇ ಮಾತಾಗಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಅನೇಕ ಸಾಧಕರನ್ನು ಗುರುತಿಸಿ ಕೇಂದ್ರ ಸರ್ಕಾರ ಇಂದು ಪ್ರಶಸ್ತಿಯನ್ನು ನೀಡುತ್ತಿದೆ. ಎಲೆ ಮರೆಯ ಕಾಯಿಯಂತೆ ಶ್ರದ್ಧೆಯಿಂದ ಕೆಲಸವನ್ನು ಮಾಡಿ ನಿವೃತ್ತಿಯಾದ ರಘುಪತಿ ಕಲ್ಕೂರ್ ಇವರನ್ನು ಗುರುತಿಸಿ ಗೌರವಿಸಿದ ಎಸ್.ಆರ್ ಶಿಕ್ಷಣ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸುತ್ತೇನೆ. ರಘುಪತಿ ಕಲ್ಕೂರ್ ಅವರು ವೃತ್ತಿಯಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿ ಮಕ್ಕಳ ಬದುಕಿಗಾಗಿ ಶ್ರಮಿಸಿದವರು. ಶಿಕ್ಷಕರು ಹೇಳುವ ಮಾತುಗಳನ್ನು ಶ್ರದ್ಧೆಯಿಂದ ಕೇಳಿ ಮಕ್ಕಳು ಪಾಲಿಸಿದರೆ ಖಂಡಿತ ಯಶಸ್ಸು ದೊರೆಯುತ್ತದೆ. ಶಿಕ್ಷಣವು, ನಮ್ಮ ವರ್ತನೆಯಲ್ಲಿ ಪರಿವರ್ತನೆ ಮಾಡಿ ಸಮಾಜಮುಖಿಯಾಗಿ ಬದುಕಲು ಸಹಕರಿಸಬೇಕು. ನಾವು ಅಂತಹ ಶಿಕ್ಷಣ ಪಡೆದರೆ ಅದು ಯೋಗ್ಯವಾದ ಶಿಕ್ಷಣ. ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಪ್ರೌಢಶಾಲೆ ವಿಭಾಗದ ಗಣಿತ ಶಿಕ್ಷಕರಾದ ವೆಂಕಟರಮಣ ಕಲ್ಕೂರ್ ಅವರು ಹೇಳಿದರು.

ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಮಾತನಾಡಿ, ಈ ಆಧುನಿಕ ಕಾಲದಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು ಶ್ರದ್ಧೆಯಿಂದ ಕೆಲಸ ಮಾಡಿ ಸಾಧನೆ ಮಾಡುವವರನ್ನು ಕಂಡಿದ್ದೇವೆ. ರಘುಪತಿ ಕಲ್ಕೂರ್ ಅಂತಹವರು ಆ ಕಾಲದಲ್ಲಿ ಬೇಕಾದ ವ್ಯವಸ್ಥೆಗಳು ಸರಿಯಾಗಿಲ್ಲದಿದ್ದರೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರು. ಇಂತಹ ಮಹನೀಯರು ನಮಗೆ ಮಾದರಿಯಾಗಬೇಕು. ಸಮಾಜಕ್ಕೆ ತನ್ನ ವೃತ್ತಿಯ ಮೂಲಕ ಕೊಡುಗೆಯನ್ನು ನೀಡಬೇಕು ಎಂಬ ತುಡಿತ ಇದ್ದಾಗ ಮಾತ್ರ ನಮ್ಮ ವೃತ್ತಿಯಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವಂತಹ ಎಲ್ಲಾ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮ ವಹಿಸುವ ನಮ್ಮ ಶಿಕ್ಷಕ ವೃಂದದ ತ್ಯಾಗವನ್ನು ನಾನು ಸ್ಮರಿಸುತ್ತೇನೆ. ಶಿಕ್ಷಕರು ಸಮಾಜದ ಭವಿಷ್ಯವನ್ನು ನಿರ್ಧರಿಸುವವರು. ತಮ್ಮ ಬಳಿ ಬರುವ ಮಕ್ಕಳನ್ನು ತಿದ್ದಿ ತೀಡಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡುವುದು ಶಿಕ್ಷಕರು. ಈ ದಿಸೆಯಲ್ಲಿ ಶಿಕ್ಷಕರು ವೃತ್ತಿಯಲ್ಲಿ ಖುಷಿ ಕೊಡುವ ಹಾಗೆ ಕೆಲಸ ಮಾಡಿದರೆ ಶಿಕ್ಷಕರಿಗೆ ಅದೇ ಪ್ರಶಸ್ತಿ ದೊರೆತಂತೆ ಎಂದು ಹೇಳಿದರು.

ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್, ಎಸ್.ಆರ್. ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಹರಿಪ್ರಸಾದ್ ನಿರೂಪಿಸಿ, ದೀಪಕ್ ಎನ್ ಸ್ವಾಗತಿಸಿ, ಪ್ರಗತಿ ವಂದಿಸಿದರು.