ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಹಾಗೂ ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಪದವಿ ಪೂರ್ವ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಅಮೃತ ಭಾರತಿ ಸಭಾಂಗಣದಲ್ಲಿ ನಡೆಯಿತು. ಅಂತರಾಷ್ಟ್ರೀಯ ಕ್ರೀಡಾಪಟು ಪೆರ್ಡೂರು ಪದ್ಮನಾಭ ಭಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ಯಾನಚಂದ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು , ದೀಪ ಬೆಳಗಿಸಿ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಮಾನಸಿಕ ಸ್ವಾಸ್ಥ್ಯಕ್ಕೆ ದೈಹಿಕ ಸದೃಢತೆ ಬಹಳ ಮುಖ್ಯ . ದೈಹಿಕ ಸದೃಢತೆಗಾಗಿ ಪ್ರತಿ ನಿತ್ಯ ಜಾಗಿಂಗ್ , ವ್ಯಾಯಾಮ , ಯೋಗ ಮಾಡಬೇಕು . ಕ್ರೀಡಾಳುಗಳು ಸರಿಯಾದ ದೀರ್ಘ ಕಾಲೀನ ಅಭ್ಯಾಸ ನಡೆಸದೆ ಸ್ಪರ್ಧೆಗೆ ಇಳಿಯುವುದು ಸೂಕ್ತವಲ್ಲ , ಅದು ನಿಮ್ಮ ಸ್ನಾಯುಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ . ವಿದ್ಯಾರ್ಥಿಗಳು ಪ್ರತಿ ನಿತ್ಯ ಓದಿನಂತೆ ಒಂದು ಗಂಟೆ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಹೇಳಿದರು.

ಕ್ರೀಡಾ ಭಾರತಿ ವತಿಯಿಂದ ಕ್ರೀಡಾ ಸಾಧಕ ವಿಖ್ಯಾತ ಶೆಟ್ಟಿ ಅವರ ತಾಯಿ ಗೀತಾ ಶೆಟ್ಟಿ ಅವರಿಗೆ ಜೀಜಾ ಮಾತಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ ರಾವ್ ಅವರಿಗೆ ಅಮೃತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಮೃತ ಭಾರತಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಅಮೃತ ಭಾರತಿ ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ , ಕ್ರೀಡಾ ಭಾರತಿ ವಿಭಾಗ ಪ್ರಮುಖ್ ಪ್ರಸನ್ನ ಶೆಣೈ , ಕ್ರೀಡಾ ಭಾರತಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಬೈಲೂರು , ಪ್ರಾಂಶುಪಾಲ ಅಮರೇಶ್ ಹೆಗ್ಡೆ , ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ, ಕ್ರೀಡಾ ಭಾರತಿ ಕಾರ್ಯದರ್ಶಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಹೆಬ್ರಿ ತಾಲೂಕು ಕ್ರೀಡಾ ಸಂಯೋಜಕ ವಿಜಯ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಮುನಿಯಲು ಪ್ರಥಮ , ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ದ್ವಿತೀಯ ಬಾಲಕಿಯರ ವಿಭಾಗದಲ್ಲಿ ಎಸ್ ಆರ್ ಪದವಿಪೂರ್ವ ಕಾಲೇಜು ಪ್ರಥಮ , ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡವು.
ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿ , ಸೀತಾನದಿ ವಿಠ್ಠಲ ಶೆಟ್ಟಿ ಪ್ರಸ್ತಾವನೆಗೈದರು . ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿದರು.