ಉಡುಪಿ : ಉಡುಪಿಯಲ್ಲಿ ಇಂದು ಸಂಭ್ರಮದ ಶ್ರೀ ಕೃಷ್ಣಾಷ್ಟಮಿ ಮತ್ತು ನಾಳೆ ವೈಭವದ ಶ್ರೀ ಕೃಷ್ಣಲೀಲೋತ್ಸವ, ಮೊಸರುಕುಡಿಕೆ ಹಬ್ಬಗಳು ನಡೆಯಲಿದೆ.

ಈ ಎರಡು ದಿನಗಳ ಹಬ್ಬಕ್ಕಾಗಿ ಉಡುಪಿಯಲ್ಲಿ ವಾರದಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಕೃಷ್ಣಮಠ ತಳಿರುತೋರಣ, ಹೂವುಗಳಿಂದ ಶೃಂಗಾರಗೊಂಡಿದೆ. ರಥಬೀದಿಯಲ್ಲಿ ಮೊಸರುಕುಡಿಕೆ ಅಥವಾ ವಿಟ್ಲಪಿಂಡಿ ಉತ್ಸವಕ್ಕೆ ಗುರ್ಜಿಗಳು ಸ್ಥಾಪನೆಗೊಂಡಿವೆ, ರಥಗಳು ಕೃಷ್ಣನ ಉತ್ಸವಕ್ಕೆ ಸಿದ್ಧವಾಗಿವೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಕ್ತಿಪರಾಕಾಷ್ಠೆ ಮುಖ್ಯ ಅಂಗ. ಶ್ರೀ ಕೃಷ್ಣನಿಗೆ ಅರ್ಘ ಪ್ರದಾನ ಇಂದು ಮಧ್ಯರಾತ್ರಿ 12.07 ಗಂಟೆಗೆ ನಡೆಯಲಿದೆ. ಪರ್ಯಾಯ ಪುತ್ತಿಗೆ ಶ್ರೀದ್ವಯರು ಕೃಷ್ಣ ಅವತಾರವೆತ್ತಿದ ಈ ಮುಹೂರ್ತದಲ್ಲಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ಭಕ್ತರು ಈ ಗಳಿಗೆಯನ್ನು ಸೃಷ್ಟಿಸಿದ ಚಂದ್ರನಿಗೆ ಕೃಷ್ಣಮಠದ ತುಳಸಿಕಟ್ಟೆಯಲ್ಲಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ.

ಬಾಲಕೃಷ್ಣನಿಗೆ ಅರ್ಪಿಸುವುದಕ್ಕಾಗಿ ಕೃಷ್ಣಮಠದ ಪಾಕಶಾಲೆಯಲ್ಲಿ 108 ಬಗೆಯ ಲಡ್ಡುಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಚಕ್ಕುಲಿ ತಯಾರಾಗಿವೆ.

ಇಂದು ಕೃಷ್ಣ ಭಕ್ತರು ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳಲ್ಲಿ ಕಳೆಯಲಿದ್ದಾರೆ. ಕೃಷ್ಣಮಠದಲ್ಲಿ ದಿನವಿಡೀ ಮುದ್ದುಕೃಷ್ಣ – ಮುದ್ದು ರಾಧೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉಡುಪಿ ನಗರದಲ್ಲಂತೂ ಹತ್ತಿಪ್ಪತ್ತಕ್ಕೂ ಹೆಚ್ಚು ಹುಲಿವೇಷಧಾರಿ ತಂಡಗಳು ಕುಣಿದು ಕುಪ್ಪಳಿಸಿ ಜನರಿಗೆ ಮನರಂಜನೆ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ಗೊಲ್ಲವೇಷಧಾರಿಗಳಿಂದ ಸಾಂಪ್ರದಾಯಿಕ ಕೃಷ್ಣನ ಲೀಲೋತ್ಸವದ ಅಂಗವಾಗಿ ಮೊಸರುಕುಡಿಕೆ ಆಟವಾಡಿ ಉತ್ಸವದ ಸಂಭ್ರಮ ಹೆಚ್ಚಿಸಲಿದ್ದಾರೆ.

ಕೃಷ್ಣನ ಮಣ್ಣಿನ ವಿಗ್ರಹಕ್ಕೆ ರಥೋತ್ಸವ, ಪರ್ಯಾಯ ಶ್ರೀಗಳಿಂದ ಕೃಷ್ಣನ ಪ್ರಸಾದ ಲಡ್ಡು ವಿತರಣೆ, ಮಧ್ವಸರೋವರದಲ್ಲಿ ವಿಗ್ರಹದ ವಿಸರ್ಜನೆ ನಡೆಯಲಿದೆ. ಇದರಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕೃಷ್ಣನ ಜನ್ಮದಿನವನ್ನು ಕಣ್ಣುಂಬಿಕೊಳ್ಳಲಿದ್ದಾರೆ.

ಇಂದು ಜೋಷಿ, ಜಗ್ಗೇಶ್, ರಕ್ಷಿತ್ ಆಗಮನ: ಇಂದು ಸಂಜೆ ರಾಜಾಂಗಣದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಜಗ್ಗೇಶ್, ಚಲನಚಿತ್ರ ನಟ ರಕ್ಷಿತ್ ಶೆಟ್ಟಿ, ಆರ್‌ಎಸ್‌ಎಸ್ ವಿದ್ಯಾರ್ಥಿ ಪರಿಷತ್ ಪ್ರಮುಖ ಮಿಲಿಂದ ಗೋಖಲೆ ಭಾಗವಹಿಸಲಿದ್ದಾರೆ.

ನಾಳೆ ಡಾ.ಹೆಗ್ಗಡೆ: ನಾಳೆ ಮಧ್ಯಾಹ್ನ 2 ಗಂಟೆಗೆ ಶ್ರೀ ಕೃಷ್ಣ ಲೀಲೋತ್ಸವವನ್ನು ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಯರ್, ಶಾಸಕ ಯಶ್ವಾಲ್ ಸುವರ್ಣ ಭಾಗವಹಿಸಲಿದ್ದಾರೆ.


ಭಗವಂತ ಅವತಾರ ಮಾಡುವಾಗ ಯಾರು ಸ್ವಾಗತ ಮಾಡುತ್ತಾರೋ ಅವರಿಗೆ ಭಗವಂತನ ವಿಶೇಷ ಕೃಪಾದೃಷ್ಟಿ ಲಭಿಸುತ್ತದೆ. ಭಗವಂತ ಜಗತ್ತಿನ ಉದ್ಧಾರಕ್ಕಾಗಿ ಅವತಾರ ಮಾಡಿರುವುದರಿಂದ ನಾವೆಲ್ಲರೂ ಅವನಿಗೆ ಕೃತಜ್ಞತೆಯನ್ನು ಸಮರ್ಪಣೆ ಮಾಡಿದರೆ, ನಾವು ಜಗತ್ತಿನ ಸೇವೆಯನ್ನು ಮಾಡಿದಷ್ಟೇ ಭಾಗ್ಯ ಪುಣ್ಯ ಫಲವನ್ನು ಪಡೆಯುತ್ತೇವೆ. ಅಂತಹ ಜಗದೋದ್ಧಾರಕನ ಈ ಅವತಾರದ ಸಂದರ್ಭದಲ್ಲಿ ನಾವೆಲ್ಲರೂ ಅವನ ವಿಶೇಷ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸೋಣ. ಭಗವಂತ ಜಗತ್ತಿನ ಉದ್ಧಾರವನ್ನು ನಿರಂತರವಾಗಿ ಮಾಡಲಿ ಎಂದು ಹಾರೈಸೋಣ

* ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪರ್ಯಾಯ ಪುತ್ತಿಗೆ ಮಠ