ಬೆಂಗಳೂರು: 2024 ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ಪರಿಶಿಷ್ಟ ವರ್ಗದ ಏಳ್ಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆಗೈದ ಐವರು ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರು ವಿಭಾಗ: ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ:
ಗಡ್ಡದಾರಹಟ್ಟಿ, ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯವರಾದ ಇವರು ಕಿಲಾರಿ ( ಜಾನುವಾರುಗಳ ಸಂರಕ್ಷಣೆ) ವೃತ್ತಿಯ ಮೂಲಕ ಸಮಾಜದ ಒಳಿತಿಗಾಗಿ ಸಲ್ಲಿಸಿದ್ದಾರೆ. ದೇವರ ಎತ್ತುಗಳ ರಕ್ಷಣೆ, ಜಾನುವಾರುಗಳ ಪೋಷಣೆ, ಸ್ಥಳೀಯ ಬುಡಕಟ್ಟು ಸಮುದಾಯದ ಸಂಸ್ಕೃತಿಯ ಸಂರಕ್ಷಣೆ, ಜಾನುವಾರುಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬುಡಕಟ್ಟು ಸಂಸ್ಕೃತಿಯ ಆಚರಣೆಯ ಮೂಲಕ ಜಾನುವಾರುಗಳ ಸಂತತಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮೀಣ ಸೊಗಡ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಇವರ ಅನುಪಮ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೈಸೂರು ವಿಭಾಗ: ಡಾ. ರತ್ನಮ್ಮ ಎಸ್.: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಹೋಬಳಿಯ ಮದ್ದೂರು ಕಾಲೋನಿಯವರಾದ ಡಾ. ರತ್ನಮ್ಮ ಎಸ್. ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸಮುದಾಯದ ಮನವೊಲಿಸಿ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ದಾಖಲಿಸುವುದು, ಸಮುದಾಯದ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಸಮುದಾಯದವರಿಗೆ ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು. ಸಮುದಾಯದ ಕಲೆ, ಕುಲ ಕಸುಬು, ಸಂಸ್ಕೃತಿಯ ಸಂರಕ್ಷಿಸುವುದು ಹಾಗೂ ಪೋಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ, ಇವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳಗಾವಿ ವಿಭಾಗ: ರಾಜಶೇಖರ ತಳವಾರ:
ಬೆಳಗಾವಿಯ ಗಾಂಧಿನಗರದವರಾದ ಇವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಬುಡಕಟ್ಟು ಸಮುದಾಯವು ವಾಸಿಸುವ ಮೂಲಭೂತ ಸೌಕರ್ಯಗಳಿಲ್ಲದ ಗುಡ್ಡಗಾಡು ಪ್ರದೇಶಗಳ ಬಗ್ಗೆ ವಿವಿಧ ಇಲಾಖೆಗಳ ಗಮನಕ್ಕೆ ತಂದು ಆ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ದೊರಕುವಂತೆ ಹಾಗೂ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಶಿಕ್ಷಣ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಶಿಬಿರ, ತರಬೇತಿಗಳನ್ನು ಆಯೋಜಿಸುವುದು. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ಸರ್ಕಾರದ ನೆರವು ದೊರಕಿಸುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸಲ್ಲಿಸಿರುವ ಸಮಾಜ ಸೇವೆಯನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಬೆಂಗಳೂರು ಕೇಂದ್ರ : ಶ್ರೀ ಕೆ. ಎಸ್. ಮೃತ್ಯುಂಜಯ:
ಬೆಂಗಳೂರು ವಾಸಿಯಾದ ಕೆ.ಎಸ್. ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡದ ಸಮುದಾಯದ ಶೈಕ್ಷಣಿಕ, ಆರ್ಥಿಕ ಆಭಿವೃದ್ಧಿ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮುದಾಯದವರಿಗೆ ದೊರಕಿಸಲು ಶ್ರಮಿಸಿದ್ದಾರೆ. ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕಾರ್ಯಾಗಾರ, ಶಿಬಿರ, ಚಿಂತನ-ಮಂಥನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪ್ರತಿನಿಧಿಸುತ್ತಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಕಲಬುರ್ಗಿ ವಿಭಾಗ: ರತ್ನಮ್ಮ ಬಿ. ಸೋಗಿ :
ವಿಜಯನಗರ ಜಿಲ್ಲೆ ಹರಪನಹಳ್ಳಿಯವರಾದ ಇವರು ವೃತ್ತಿ ರಂಗಭೂಮಿ ಖ್ಯಾತ ಕಲಾವಿದರಾಗಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದರಾಗಿದ್ದಾರೆ. ಐತಿಹಾಸಿಕ, ಪೌರಾಣಿಕ, ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಂಗ ಭೂಮಿ ಕ್ಷೇತ್ರದ ಉಳಿವು ಹಾಗೂ ಬೆಳವಣಿಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜದ ಒಳಿತಿಗಾಗಿ ಹಾಗೂ ಅನೇಕ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ತಮ್ಮ ಅಭಿನಯದ ಮೂಲಕ ಜಾಗೃತಿ ಮೂಡಿಸಿದಾರೆ. ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿದ ಗಣನೀಯ ಕಲಾ ಸೇವೆಯನ್ನು ಗುರುತಿಸಿ ಇವರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೆಂಗಳೂರು , ಮೈಸೂರು, ಬೆಳಗಾವಿ, ಕಲಬುರಗಿ ಕಂದಾಯ ವಿಭಾಗಗಳು ಹಾಗೂ ಬೆಂಗಳೂರು ಕೇಂದ್ರ ಸ್ಥಾನದಿಂದ ತಲಾ ಒಬ್ಬರಂತೆ ಒಟ್ಟು ಐದು ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಈ ಸಾಧಕರಿಗೆ ತಲಾ 20 ಗ್ರಾಮ ಬಂಗಾರದ ಪದಕ ಹಾಗೂ ಐದು ಲಕ್ಷ ರೂ. ನಗದು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.2024ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಇವರ ಸ್ಮರಣಾರ್ಥ ನೀಡುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಆಯ್ಕೆ ಮಾಡಲು ಕೆ. ಹೆಚ್.ಮ್ಲಲೇಶಪ್ಪ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಗಣ್ಯರನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.