ಮಂಗಳೂರು: ಭಾರತೀಯ ಕ್ಯಾಲೆಂಡರ್ ನಲ್ಲಿ ಮಹತ್ವದ ದಿನವಾದ “ಗುರು ಪೂರ್ಣಿಮಾ”ದ ಮಂಗಳಕರ ದಿನದಂದು ಗುರುಗಳನ್ನು ಗೌರವಿಸುವ ಸಂಪ್ರದಾಯವನ್ನು ಪಾಲಿಸುವುದು ಕೃತಜ್ಞತೆ ಮತ್ತು ಗೌರವದ ಕ್ಷಣವಾಗಿದೆ.
ಗುರು ಎಂಬುದು ಅರಿವಿನ ಅಥವಾ ಜ್ಞಾನದ ಸಂಕೇತ. ಅಂತಹ ಜ್ಞಾನದ ನೆಲೆಯೆಡೆಗೆ ಸಾಗುವ ಹಾದಿಯನ್ನು ತೋರಿಸುವವನೇ ಶ್ರೇಷ್ಠ ಗುರು. ಗುರು ಮತ್ತು ಗುರಿಯ ಮಹತ್ವವನ್ನು ಸಾರುವ ಶ್ರೀಗುರುಪೂರ್ಣಿಮಾ ದಿನವನ್ನು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದು, ಅದರಂತೆ ಈ ಬಾರಿ ವಿಶೇಷ ಸಂಭ್ರಮಗಳೊಂದಿಗೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ನೂತನ ಸಭಾಂಗಣದಲ್ಲಿ ಇದೇ 21ರ ಭಾನುವಾರದಂದು ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಂದು ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ಶ್ರೀ ಗುರುಪಾದುಕಾಪೂಜೆ, ದೇವೀ ಪೂಜೆ, ಅರ್ಚನೆ, ಗುರುಪೂರ್ಣಿಮಾ ದಿನದ ಮಹತ್ವದ ಕುರಿತು ಸಂದೇಶ, ಭಜನೆ, ಆರತಿ, ಭಕ್ತರಿಂದ ಕ್ಷೀರಾಭಿಷೇಕ, ಪ್ರಸಾದ ವಿತರಣೆ ಮತ್ತು ಮಹಾ ಪ್ರಸಾದ ವಿತರಣೆ ಇರುತ್ತದೆ ಎಂದು ಡಾ. ಪೆರ್ಲ ಅವರು ತಿಳಿಸಿದರು.ಅಂದು ಪೂರ್ವಾಹ್ನ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಗುರು ಹೋಮ ಮತ್ತು ಮಹಾ ಮೃತ್ಯುಂಜಯ ಹೋಮ ಕೂಡ ಜರುಗಲಿರುವುದು ಎಂದು ಅವರು ಹೇಳಿದರು.
ಅಮೃತ ಬಂಧನ್
ಅಮೃತ ಕುಟುಂಬ ಸೇರ್ಪಡೆ
ಆಧ್ಯಾತ್ಮಿಕ ಅಸಕ್ತಿ ಉಳ್ಳವರು ಮತ್ತು ಶ್ರೀಮಾತಾ ಅಮೃತಾನಂದಮಯಿ ದೇವಿಯವರ ಸಮಾಜಮುಖಿ ಸೇವಾ ಯೋಜನೆಗಳಲ್ಲಿ ಭಾಗವಹಿಸಲು ಇಚ್ಛೆ ಹೊಂದಿರುವವರು ವಿಶ್ವದ ಪ್ರತಿಷ್ಠಿತ ಅಮೃತಾ ಫ್ಯಾಮಿಲಿ ಸದಸ್ಯರಾಗಿ ಸೇರಲು ಅವಕಾಶವಿರುತ್ತದೆ. ಅಂದು ಪೂಜಾ ವಿಧಿಗಳೊಂದಿಗೆ ಸದಸ್ಯತ್ವ ಸ್ವೀಕಾರ ಮಾಡಲಾಗುತ್ತದೆ.ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಇವರ ವತಿಯಿಂದ ಜಿಲ್ಲೆಯ ಪವಿತ್ರ ದೇವೀ ಸಾನ್ನಿಧ್ಯವಾದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸೇವಾ ಸಮಿತಿ ಕಾರ್ಯದರ್ಶಿ ಡಾ. ಅಶೋಕ್ ಶೆಣೈ ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಶ್ ಅಮೀನ್ ವಂದಿಸಿದರು.