ಮಂಗಳೂರು: ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ‌ ಆಗಸ್ಟ್ 26 ರ ಸೋಮವಾರದಂದು ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನೇತೃತ್ವದಲ್ಲಿ ಬಾಲಗೋಪಾಲ ಪೂಜೆಯ ಮೂಲಕ‌ ಶ್ರೀಕೃಷ್ಣನ ಆರಾಧನೆ ಮಾಡಲಾಯಿತು. ಮಠದ ಯುವ ಕಲಾವಿದರ ಭಜನಾ ತಂಡದ ಸುಶ್ರಾವ್ಯ ಭಜನೆಯು ನೆರೆದ ಭಕ್ತರ ಮನರಂಜಿಸಿತು.

ಪುಟಾಣಿ ಮಕ್ಕಳಿಂದ ಏರ್ಪಟ್ಟ ಬಾಲಗೋಪಾಲನ ವಿವಿಧ ದೃಶ್ಯಾವಳಿಗಳು ಪ್ರೇಕ್ಷಕರನ್ನು ರಂಜಿಸಿತು. ಪ್ರಸಿದ್ಧ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ಶ್ರೀಕೃಷ್ಣನ ಬಗೆಗಿನ ವಿಶೇಷ ಭರತನಾಟ್ಯ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು. ಅಮ್ಮನ ಭಕ್ತರಿಂದ ಜರಗಿದ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಮಧ್ಯರಾತ್ರಿ ವರೆಗೆ ಕಾರ್ಯಕ್ರಮ ನಡೆಯಿತು. ಅನಂತರ ಆರತಿ ಹಾಗೂ ಪ್ರಸಾದ ವಿತರಣೆ ಜರುಗಿತು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ, ಉಪಾಧ್ಯಕ್ಷ ಸುರೇಶ್ ಅಮೀನ್, ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಡಾ.ಅಶೋಕ ಶೆಣೈ ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.