ಬ್ರಹ್ಮಾವರ: ಸಾಸ್ತಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಏ. 1ರಿಂದ 3ರವರೆಗೆ ನಡೆಯಲಿದೆ.

ಪಾಂಡೇಶ್ವರದ ವಿದ್ವಾನ್ ವಿಜಯ ಮಂಜ‌ರ್ ಮಾರ್ಗದರ್ಶನದಲ್ಲಿ ಉದ್ಯಮಿ ಎಂ.ಸಿ.ಚಂದ್ರಶೇಖ‌ರ್, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ ಮತ್ತು ಗ್ರಾಮಸ್ಥರ ಸಾರಥ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.

ಏ. 1ರಂದು ಸಾಮೂಹಿಕ ದೇವತಾ ಪ್ರಾರ್ಥನೆ ಸ್ವಸ್ತಿವಾಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 3ರಿಂದ ಹೊರೆಕಾಣಿಕೆ ಮೆರವಣಿಗೆ. 2ರಂದು ದೇವತಾ ಪ್ರಾರ್ಥನೆ, ನವಗ್ರಹ ಹೋಮ, ಮಧ್ಯಾಹ್ನ 3ರಿಂದ ಪ್ರವೀಣ್‌ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ, ಸಂಜೆ 5.30ರಿಂದ ಪುತ್ತೂರು ಜಗದೀಶ ಆಚಾರ್ ಮತ್ತು ತಂಡದವರಿಂದ ಭಕ್ತಿ ರಸಮಂಜರಿ, ರಾತ್ರಿ 7ರಿಂದ ವಿದ್ವಾನ್ ವಿಜಯ ಮಂಜರ್ ಪಾಂಡೇಶ್ವರ ಅವರಿಂದ ಧಾರ್ಮಿಕ ಸಂದೇಶ ನಡೆಯಲಿದೆ.

ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಲಿ, ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ, ಪ್ರಮೋದ ಮದರಾಜ್, ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಭಾಗವಹಿಸಿದ್ದರು.

ಏ. 3ರಂದು ಬೆಳಿಗ್ಗೆ 9ರಿಂದ ಪುಣ್ಯಾಹ ವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 3ರಿಂದ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ, ಸ್ತಬ್ಧಚಿತ್ರ, ಸಕಲ ಮಂಗಳವಾದ್ಯಗಳೊಂದಿಗೆ ಪದ್ಮಾವತಿ ಸಹಿತ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ, ಸಂಜೆ 5ರಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.