Join The Telegram | Join The WhatsApp |
ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ನ.23ಕ್ಕೆ ವಿಚಾರಣೆಗೆ ಬರಲಿದ್ದು, ರಾಜ್ಯದ ಪರವಾಗಿ ಸಮರ್ಥವಾದ ವಾದ ಮಂಡಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿಕೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ. ಹಾಗೂ ಗಡಿ ವಿವಾದದ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರಕಾರದ ಬೆಂಬಲಕ್ಕೆ ನಿಂತುಕೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
1956 ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. 2004 ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಸತತ 18 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪರ ಸಮರ್ಥವಾದ ವಾದ ಮಂಡಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನೂ ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ. ಅದಕ್ಕಾಗಿ ಮಹಾರಾಷ್ಟ್ರ ಸರಕಾರದ ಸಚಿವರಾದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ಉಭಯರನ್ನು ಗಡಿ ಉಸ್ತುವಾರಿ ಸಚಿವರೆಂದು ನಿಯೋಜಿಸಿ ಬೆಳಗಾವಿ, ಬೀದರ, ಭಾಲ್ಕಿ, ಕಾರವಾರ ಸೇರಿದಂತೆ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು ʻಮಹಾʼ ವಾದವನ್ನು ಮಹಾರಾಷ್ಟ್ರ ಸರಕಾರ ಸುಪ್ರಿಂ ಕೋರ್ಟ್‌ನಲ್ಲಿ ಮಂಡಿಸಿದೆ.
ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರಕಾರ ಕಾಲ ಕಾಲಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿವಾದವನ್ನು ಮಂಡಿಸುತ್ತಲೇ ಬಂದಿದೆ. ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿರುವುದು ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸರಕಾರ ರಚನೆ ಮಾಡಿರುವ ವಕೀಲರ ತಂಡದಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಉದಯ ಹೊಳ್ಳ ಮತ್ತು ಬೆಳಗಾವಿಯ ವಕೀಲ ಮಾರುತಿ ಜಿರಲಿ ಹಾಗೂ ರಘುಪತಿ ಅವರನ್ನು ನೇಮಿಸಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈಗಾಗಲೆ ರಾಜ್ಯದ ಪರವಾಗಿ ವಾದ ಮಂಡಿಸಲಿರುವ ವಕೀಲರ ತಂಡವು 2-3 ಬಾರಿ ಸಭೆ ಸೇರಿ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಯಾವ ರೀತಿಯಲ್ಲಿ ವಾದ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಸರ್ವ ಪಕ್ಷದ ನಾಯಕರ ಸಲಹೆಗಳನ್ನು ಪಡೆದು ನಾಳೆ ರಾಜ್ಯದ ಪರವಾಗಿ ಸುಪ್ರಿಂ ಕೋರ್ಟ್‌ನಲ್ಲಿ ಸಮರ್ಥವಾದ ವಾದ ಮಂಡಿಸುವ ಮೂಲಕ ಕನ್ನಡಿಗರ ಸ್ವಾಭಿಮಾನದ ಗಡಿಯ ರಕ್ಷಣೆಯನ್ನು ಮಾಡಿಕೊಳ್ಳುವಲ್ಲಿ ಸಮರ್ಥರಾಗಲಿದ್ದಾರೆ ಎನ್ನುವ ಭರವಸೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ಪರಿಷತ್ತಿನ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಸ್ತುತ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಾಜಕೀಯ ವಸ್ತುವಾಗಿದೆ. ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಅಲ್ಲಿಯ ಎಲ್ಲಾ ಪಕ್ಷಗಳು ಕೂಡ ತಮ್ಮ ರಾಜಕೀಯ ಕಾರಣಕ್ಕಾಗಿ ಇದನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಿತ್ಯವೂ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಈವರೆಗೂ ಯಶಸ್ವಿಯಾಗಿಲ್ಲ, ಮುಂದಿನ ದಿನಗಳಲ್ಲಿ ಯಶಸ್ವಿಯಾಗುವುದೂ ಇಲ್ಲ ಎನ್ನುವುದು ಪರಿಷತ್ತಿಗೆ ವಿಶ್ವಾಸವಿದೆ. ಕರ್ನಾಟಕದ ಗಡಿ ರಕ್ಷಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಸರಕಾರದೊಂದಿಗೆ ಸದಾ ಕಟಿಬದ್ಧವಾಗಿ ನಿಲ್ಲಿದೆ. ಕನ್ನಡ ನಾಡು, ನುಡಿ, ನೀರಿನ ಬಗ್ಗೆ ಸರಕಾರದೊಂದಿಗೆ ಪ್ರತಿಯೋಬ್ಬ ಕನ್ನಡಿಗನೂ ಪಕ್ಷ ಬೇಧ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿಬೇಕಿದೆ. ಪ್ರಸಂಗ ಬಂದರೆ ಮುಂದಿನ ದಿನಗಳಲ್ಲಿ ಎಲ್ಲ ಕನ್ನಡದ ಮನಸ್ಸುಗಳು ಒಂದಾಗಿ ಗಡಿ ತಂಟೆ ಮಾಡುವವರ ವಿರುದ್ಧ ಹೋರಾಟ ಮಾಡಲು ಹಿಂದೇಟು ಹಾಕಬಾರದು. ಸರಕಾರ ಗಡಿ ರಕ್ಷಣೆಗೆ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ನೀಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
Join The Telegram | Join The WhatsApp |