ಬೆಳಗಾವಿ :
“ನೀರಾವರಿ ಕಾಲುವೆ ಆಸುಪಾಸಿನ ಒಂದು ಕಿ.ಮೀ ಸುತ್ತಳತೆಯಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಪಂಪ್ ಮಾಡಿ ನೀರೆತ್ತುವುದನ್ನು ನಿಷೇಧಿಸಲು ಮುಂದಿನ ವಿಧಾನಸಭೆ ಅಧಿವೇಶನದ ವೇಳೆಗೆ ಕಾನೂನು ರೂಪಿಸಲಾಗುವುದು ಮಂಡಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಬೈರನಪಾದ ಏತ ನೀರಾವರಿ ಯೋಜನೆ ಮತ್ತು ಕಾಲುವೆಗಳಿಗೆ ಪಂಪ್‌ಸೆಟ್ ಅಳವಡಿಸಿ ನೀರು ಎತ್ತುವ ಸಮಸ್ಯೆಯ ಬಗ್ಗೆ ಶಾಸಕ ಬಿ.ಪಿ. ಹರೀಶ್ ವಿಧಾನಸಭೆಯಲ್ಲಿ ಗುರುವಾರ ಗಮನ ಸೆಳೆದಾಗ ಶಿವಕುಮಾರ್ ಅವರು ಉತ್ತರಿಸಿದರು.

“ಇಡೀ ರಾಜ್ಯದಾದ್ಯಂತ ನೀರಾವರಿ ಕಾಲುವೆಗಳಿರುವ ಎಲ್ಲೆಡೆ ಈ ಸಮಸ್ಯೆಯಿದೆ. ಕಾಲುವೆ ನೀರನ್ನು ಪಂಪ್ ಮಾಡಿ ಮೇಲೆತ್ತುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಬಜೆಟ್ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ, ಬೊಮ್ಮಾಯಿ ಅವರು 22 ಸಾವಿರ ಕೋಟಿ ರೂ.ಅನುದಾನ ನೀಡುತ್ತೇವೆ ಎಂದಿದ್ದರು. ಆನಂತರ ಅನುದಾನ ನೀಡಲಾಗದು ಎಂದರು. ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ನನ್ನನ್ನು ಭೇಟಿ ಮಾಡಿ ‘ಇದನ್ನು ರಾಷ್ಟ್ರೀಯ ಯೋಜನೆ ಮಾಡಲು ಆಗುವುದಿಲ್ಲ’ ಎಂದಿದ್ದರು. ಈ ಕುರಿತು ಅವರ ಬಳಿಯೂ ಚರ್ಚೆ ನಡೆಸಿದ್ದೆ.

ಕೇಂದ್ರ ಬಜೆಟ್‌ನಲ್ಲಿ ನಿಗಧಿಯಾಗಿದ್ದ 5 ಸಾವಿರ ಕೋಟಿ ಅನುದಾನ ಬಿಡುಗಡೆ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಅವರ ಭೇಟಿಗೆ ಸಮಯ ನಿಗದಿಯಾದ ನಂತರ ನೀವು ನಮ್ಮ ಜೊತೆ ಬರಬಹುದು. ಎಲ್ಲರ ಸಹಕಾರ ದೊರೆತರೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂದರು.

ಬೈರನಪಾದ ಏತ ನೀರಾವರಿ ಹಳೆಯ ಯೋಜನೆಯಾಗಿದ್ದು ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು” ಎಂದು ತಿಳಿಸಿದರು.

*’ಪರಿಹಾರ ನಿಮ್ಮ ಕೈಯಲ್ಲೇ ಇದೆ’ ಎಂದು ಶಾಸಕ ಬಿ.ಪಿ.ಹರೀಶ್‌ಗೆ ಕಿಚಾಯಿಸಿದ ಡಿಸಿಎಂ*

ನಾನು ಮೂರು ಬಾರಿ ಬೇರೆ ಬೇರೆ ಪಕ್ಷಗಳಿಂದ ಗೆದ್ದು ವಿರೋಧ ಪಕ್ಷದಲ್ಲೇ ಇದ್ದೇನೆ. ಹೀಗಾಗಿ ನನ್ನ ಕ್ಷೇತ್ರದ ಕೆಲಸ ಆಗುತ್ತಿಲ್ಲ ಎಂದು ಜನ ಮಾತಾಡುತ್ತಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಅವರು ಅವಲತ್ತುಕೊಂಡಾಗ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಪರಿಹಾರ ನಿಮ್ಮ ಕೈಯಲ್ಲೇ ಇದೆ. ಒಂದು ಬಾರಿ ಜನತಾದಳ, ನಂತರ ಕಾಂಗ್ರೆಸ್, ಈಗ ಬಿಜೆಪಿಯಲ್ಲಿ ಪ್ರತಿ ಸಲವೂ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳುವಂತಾಗಿದೆ ಹರೀಶ್ ಅವರ ಪರಿಸ್ಥಿತಿ. ಆಡಳಿತ ಪಕ್ಷದಲ್ಲಿ ಇದ್ದಿದ್ದರೆ ಕ್ಷೇತ್ರದ ಕೆಲಸಗಳಾದರೂ ನಡೆಯುತ್ತಿದ್ದವು ಎಂಬುದು ಅವರ ನೋವು” ಎಂದು ಕಾಲೆಳೆದರು. ಈಗಲೂ ಯೋಚನೆ ಮಾಡಿ ಎಂದರು.

ಆಗ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, “ಕಾಮಗಾರಿ ಮಾಡಿಕೊಡುತ್ತೇವೆ ಎಂದು ಆಸೆ ತೋರಿಸಿ ಪರೋಕ್ಷವಾಗಿ ಪಕ್ಷಾಂತರ ಮಾಡಿ ಎಂದು ಡಿಸಿಎಂ ಹೇಳುತ್ತಿದ್ದಾರೆ” ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ನಂತರ ಶಿವಕುಮಾರ್ ಅವರು “ಹರೀಶ್ ಇದು ನಿಮಗೆ ಬಿಟ್ಟ ವಿಚಾರ”‌‌ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.