ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆಯವರು ಮಾ.12ರ ಸಂಜೆ 4 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಇವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿತ್ತು. ರಾಜ್ಯದಲ್ಲಿ ಬಹು ಚರ್ಚಿತ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿಯನ್ನು ಇತ್ತೀಚಿಗಷ್ಟೇ ಸರಕಾರಕ್ಕೆ ಸಲ್ಲಿಸಿದರು.ಆಯೋಗದ ಅಧ್ಯಕ್ಷ ಅವಧಿ‌ ಮುಗಿದ ಆನಂತರ ಕಾಂಗ್ರೆಸ್ ಸೇರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.

ಉಡುಪಿ/ಚಿಕ್ಕಮಗಳೂರು :
ಉಡುಪಿ/ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಜನನಾಯಕ, ಹೆಸರಾಂತ ನ್ಯಾಯವಾದಿ ಕೆ.ಜಯಪ್ರಕಾಶ ಹೆಗ್ಡೆ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುವುದು ಖಚಿತವಾಗಿದ್ದು, ಇಂದೇ ಮರಳಿ ಕಾಂಗ್ರೆಸ್ ಸೇರಲಿದ್ದಾರೆ. ಈ ಮೂಲಕ ಬಿಜೆಪಿ ಭದ್ರಕೋಟೆಯಲ್ಲೇ ಮತ್ತೊಮ್ಮೆ ಕಮಲ ಪಡೆಯನ್ನು ಕಟ್ಟಿ ಹಾಕುವ ರಣತಂತ್ರ ರೂಪಿಸಲಾಗಿದೆ.

ಹಿರಿಯ ನ್ಯಾಯವಾದಿ, ಹಿಂದುಳಿದ ಆಯೋಗದ ನಿಕಟಪೂರ್ವ ಅಧ್ಯಕ್ಷ, ಮಾಜಿ ಸಚಿವ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕರಾವಳಿ ಪ್ರದೇಶದ ಬಲಿಷ್ಠ ನಾಯಕ.

ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತಿದೆ. ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಗಳು ಟಿಕೆಟ್ ಸಿಗುವ ನಿಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಪರ್ಯಟನೆಯ ಪರ್ವ ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಹೆಸರು ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಕೇಳಿ ಬಂದಿತ್ತು.

ಜಯಪ್ರಕಾಶ ಹೆಗ್ಡೆ 2012 ರ ಲೋಕಸಭಾ ಉಪಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು. ಆದರೆ, ಅನಂತರ ನಡೆದ ಬೆಳವಣಿಗೆಗಳಲ್ಲಿ ಬಿಜೆಪಿಯತ್ತ ಮುಖ ಮಾಡಿದ್ದರು.. ಇದೀಗ ಮುಂಬರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಲೋಕಸಭೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಅಂಶುಮತ್ ಗೆ ನಿಗಮ ಮಂಡಳಿ ಪಟ್ಟ ನೀಡಲು ಕಾಂಗ್ರೆಸ್‌ ನಿರ್ಣಯಿಸಿದ್ದು, ಹೀಗಾಗಿ ಹೈಕಮಾಂಡ್ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆಗೆ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಸಂದೇಶ ರವಾನಿಸಲಾಗಿತ್ತು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆಯವರ ಬಂಟ ಸಮುದಾಯದ ಮತಗಳು ಅತ್ಯಂತ ನಿರ್ಣಾಯಕವಾಗಿವೆ. ಹೀಗಾಗಿ ಕಾಂಗ್ರೆಸ್ ಗೆಲುವಿಗೆ ಇದು ರಹದಾರಿಯಾಗಬಲ್ಲದು ಎಂಬುದು ಕಾಂಗ್ರೆಸ್ ಪಕ್ಷದ ಚಿಂತನೆಯಾಗಿದೆ. ಒಂದು ವೇಳೆ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸುವುದು ನಿರಾಯಾಸವಾಗಬಹುದು. ಸ್ವಜಾತಿ ಪ್ರೇಮದಿಂದ ಜಯಪ್ರಕಾಶ ಹೆಗ್ಡೆ ಅವರಿಗೆ ಕರಾವಳಿ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳು ಹರಿದು ಬರಲಿವೆ. ಗೆಲುವು ಸುಲಭವಾಗಬಹುದು.

ಈ ನಡುವೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅವರನ್ನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮುಂದುವರಿಸಿದೆ. ಈ ಎಲ್ಲಾ ಲಕ್ಷಣಗಳು ಜಯಪ್ರಕಾಶ ಹೆಗ್ಡೆ ಅವರಿಗೆ ಕಾಂಗ್ರೆಸ್ ಸರ್ಕಾರದ ಕೃಪಾಕಟಾಕ್ಷ ಇರುವುದನ್ನು ಸಾಬೀತುಪಡಿಸಿವೆ.

ಬಿಜೆಪಿ ಈಗಾಗಲೇ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಾಕಷ್ಟು ವಿರೋಧದ ನಡುವೆ ಮತ್ತೊಮ್ಮೆ ಟಿಕೆಟ್ ನೀಡಲು ಮುಂದಾಗಿದೆ. ಬಿಜೆಪಿ ಆಡಳಿತ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಮುಂಬರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿರುವ ಬೆನ್ನಲ್ಲೇ ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್‌ನತ್ತ ಬಂದಿದ್ದಾರೆ.

ಈ ಮೊದಲು ಅಸ್ತಿತ್ವದಲ್ಲಿದ್ದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆ ಮೂರು ಸಲ ದಿಗ್ವಿಜಯ ಸಾಧಿಸಿದ್ದರು. ಉಡುಪಿ, ಬ್ರಹ್ಮಾವರ, ಕುಂದಾಪುರ ಭಾಗದಲ್ಲಿ ಜಯಪ್ರಕಾಶ ಹೆಗ್ಡೆ
ಭಾರೀ ಹಿಡಿತ ಹೊಂದಿದ್ದಾರೆ. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇಲ್ಲಿದ್ದು ಚುನಾವಣೆಯಲ್ಲಿ ಇದೆಲ್ಲ ಅಂಶಗಳು ಭಾರಿ ಲಾಭವಾಗಿ ಮತವಾಗಿ ಪರಿವರ್ತಿಸುವುದರಲ್ಲಿ ಯಾವ ಸಂದೇಹ ಇಲ್ಲ. ಇವೆಲ್ಲವನ್ನು ಲೆಕ್ಕಾಚಾರ ಹಾಕಿಯೇ ಕಾಂಗ್ರೆಸ್ ಪಕ್ಷ ಅವರಿಗೆ ಲೋಕಸಭಾ ಟಿಕೆಟ್ ನೀಡಲು ಮುಂದಾಗಿದೆ ಎಂಬ ಮಾತು ವ್ಯಕ್ತವಾಗಿದೆ.

ಜನತಾ ಪರಿವಾರ ಮೂಲದ ಜಯಪ್ರಕಾಶ ಹೆಗ್ಡೆ ಅವರು ಬಲಶಾಲಿ ನಾಯಕರಾಗಿದ್ದು, ಬ್ರಹ್ಮಾವರ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಹಲವು ಬಾರಿ ಸಚಿವರಾಗಿದ್ದವರು. ಬ್ರಹ್ಮಾವರ ಕ್ಷೇತ್ರ ರದ್ದಾದ ಬಳಿಕ ಅತಂತ್ರರಾದದಂತೆ ಕಂಡುಬಂದ ಅವರು ಬಳಿಕ ಕಾಂಗ್ರೆಸ್‌ ಸೇರಿದ್ದರು. 2009 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅವರು ಬಿಜೆಪಿಯ ಡಿ.ವಿ. ಸದಾನಂದ ಗೌಡ ವಿರುದ್ಧ ಸೋಲು ಅನುಭವಿಸಿದ್ದರು. 2012 ರಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ ಈಗಿನ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಎದುರು ಜಯ ಸಾಧಿಸಿದ್ದರು. ಆದರೆ, 2014 ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರ ಎದುರು ಸೋಲು ಕಂಡರು.

ಈ ನಡುವೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ಅವರು ಕಣಕ್ಕಿಳಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲನುಭವಿಸಿತ್ತು ಮಾತ್ರವಲ್ಲ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಿಂತ ಜಯಪ್ರಕಾಶ ಹೆಗ್ಡೆ ಅವರಿಗೇ ಹೆಚ್ಚು ಮತ ಸಿಕ್ಕಿತ್ತು.

ಇದಾದ ಬಳಿಕ ಸ್ವಲ್ಪ ಕಾಲ ರಾಜಕೀಯದಿಂದಲೇ ದೂರವಿದ್ದ ಅವರು ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು. ಈ ಹಂತದಲ್ಲಿ ವರ್ಚಸ್ವಿ ವ್ಯಕ್ತಿತ್ವ ಹೊಂದಿರುವ ಅವರನ್ನು ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುವ ಮೂಲಕ ಬಿಜೆಪಿ ಪಾಲಿಗೆ ಈ ಕ್ಷೇತ್ರದಲ್ಲಿ ಕಠಿಣ ಪೈಪೋಟಿ ನೀಡಲಾಗುತ್ತಿದೆ.

ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆಗೆ ಸ್ವಾಗತ: ಪಕ್ಷ ಘೋಷಿಸಿದ ಅಭ್ಯರ್ಥಿಗೆ ಬೆಂಬಲ
ಕುಂದಾಪುರ: ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ತತ್ವದ ಮೇಲೆ ನಂಬಿಕೆ ಇಟ್ಟು ಯಾರೇ ಆದರೂ ಪಕ್ಷವನ್ಮು ಸೇರುವುದಾದರೆ ಅವರನ್ನು ಪಕ್ಷ ಸ್ವಾಗತಿಸುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಹೇಳಿದ್ದು, ಪಕ್ಷದ ಮುಖಂಡರ ನಿಲುವಿಗೆ ನಮ್ಮ‌ ಸಹಮತ ಇರುವುದಾಗಿ ಮಾಜಿ‌ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಎಮ್. ದಿ‌ನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಜಂಟಿ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

ಮಾಜಿ‌ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಗ್ರೆಸ್ ಪಕ್ಷ‌ ಸೇರ್ಪಡೆಯಾಗುವ ಕುರಿತು ಈಗಾಗಲೇ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ‌ ವಿಶ್ವಾಸವನ್ನು ಗಳಿಸಿಕೊಂಡಿದ್ದ ಅವರು, ಮರಳಿ ಕಾಂಗ್ರೆಸ್‌ ಪಕ್ಷವನ್ನು ಸೇರುವುದಿದ್ದಲ್ಲಿ ನಾವು ಸ್ವಾಗತಿಸುತ್ತೇವೆ.

ಕಾಂಗ್ರೆಸ್ ಪಕ್ಷದೊಂದಿಗೆ ಅಪರಿಮಿತ ಸಂಬಂಧಗಳನ್ನು‌ ಹೊಂದಿರುವ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಯಾರೇ ಅಭ್ಯರ್ಥಿಗಳನ್ನು‌ ಘೋಷಣೆ ಮಾಡಿದರೂ ಪಕ್ಷದ ನಿಷ್ಠಾವಂತ‌ ಕಾರ್ಯಕರ್ತರುಗಳಾದ ನಾವುಗಳು ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.